ಬೆಂಗಳೂರು:ನಾವು ಸಹ ಟಿಪ್ಪು ಪ್ರತಿಮೆ ಕಟ್ಟುತ್ತೇವೆ ಎಂದು ಹೇಳಿಕೆ ನೀಡಿರುವ ಮಾಜಿ ಸಚಿವ ತನ್ವೀರ್ ಸೇಠ್ ಹೇಳಿಕೆ ಈಗ ಕಾಂಗ್ರೆಸ್ ನಾಯಕರಲ್ಲೇ ಸಾಕಷ್ಟು ಗೊಂದಲ ಉಂಟಾಗುವಂತೆ ಮಾಡಿದೆ. ಈ ಹೇಳಿಕೆಗೆ ಕಾಂಗ್ರೆಸ್ ನಾಯಕರಲ್ಲೇ ಈಗ ವೈವಿಧ್ಯಮಯ ಹೇಳಿಕೆಗಳು ಕೇಳಿಬರುತ್ತಿದ್ದು, ಕಾಂಗ್ರೆಸ್ ಪಕ್ಷದ ನಿಲುವನ್ನು ತನ್ವೀರ್ ಸೇಠ್ ನೀಡಿದ್ದಾರಾ ಅಥವಾ ಅವಸರದಲ್ಲಿ ಇಂತದ್ದೊಂದು ಹೇಳಿಕೆ ಕೊಟ್ಟಿದ್ದಾರಾ ಎನ್ನುವ ಅನುಮಾನ ಮೂಡುತ್ತಿದೆ. ಇದು ಕಾಂಗ್ರೆಸ್ ನಾಯಕರಲ್ಲೇ ಒಮ್ಮತ ಇಲ್ಲ ಎನ್ನುವ ಸೂಚನೆ ಗೋಚರಿಸುತ್ತಿದೆ.
ಇದೀಗ ಸೇಠ್ ಹೇಳಿಕೆ ಬಗ್ಗೆ ಕೈ ಪಾಳಯದಲ್ಲಿ ಪರ-ವಿರೋಧ ಶುರುವಾಯ್ತಾ? ಎಂಬ ಅನುಮಾನ ಸಹ ಮೂಡುತ್ತಿದೆ. ತನ್ವೀರ್ ಸೇಠ್ ಹೇಳಿಕೆಗೆ ಸಿದ್ದರಾಮಯ್ಯ ಬೆಂಬಲ ವ್ಯಕ್ತಪಡಿಸಿದರೆ, ಈ ವಿಷಯವಾಗಿ ಸೇಠ್ ಜತೆ ಮಾತನಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನುಣುಚಿಕೊಂಡಿದ್ದಾರೆ. ಪಕ್ಷವನ್ನು ಒಂದು ಧರ್ಮಕ್ಕೆ ಸೀಮಿತವಾಗಿಸಬಾರದು ಎನ್ನುವುದು ಡಿಕೆಶಿ ನಿಲುವಾದರೆ, ತಮ್ಮ ಮತ ಬ್ಯಾಂಕ್ ಕೈತಪ್ಪದಿರಲಿ ಎನ್ನುವ ಪ್ರಯತ್ನ ಸಿದ್ದರಾಮಯ್ಯ ಅವರದ್ದಾಗಿರುವಂತೆ ಭಾಸವಾಗುತ್ತಿದೆ.
ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಂದರ್ಭ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ತನ್ವೀರ್ ಸೇಠ್ ಹೇಳಿಕೆ ನೀಡಿದ್ದಾರೆ. ಟಿಪ್ಪು ಪ್ರತಿಮೆ ಮಾಡಲಿ ಬಿಡಿ, ಮಾಡಿದರೆ ತಪ್ಪೇನು? ಇತಿಹಾಸ ತಿರುಚುವರರು ಬಿಜೆಪಿಯವರು ಅಂತಾ ಹೇಳಿ ಸೇಠ್ ಹೇಳಿಕೆಯನ್ನು ಬೆಂಬಲಿಸಿದರು. ಆದರೆ ಟಿಪ್ಪು ಪ್ರತಿಮೆ ಬಗ್ಗೆ ಡಿ.ಕೆ ಶಿವಕುಮಾರ್ ಮೌನ ವಹಿಸಿದ್ದಾರೆ. ಟಿಪ್ಪು ಪ್ರತಿಮೆ ನಿರ್ಮಾಣ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಡಿಕೆಶಿ ಮೌನವಹಿಸಿದ್ದು, ತನ್ವೀರ್ ಜೊತೆ ಮಾತಾಡ್ತೀನಿ ಎಂದಷ್ಟೇ ಹೇಳಿದ್ದಾರೆ.
ಎಂಬಿಪಿ ಸಮರ್ಥನೆ:ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಟಿಪ್ಪು ಅವರು ಬ್ರಿಟಿಷ್ ವಿರುದ್ಧ ಹೋರಾಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಾಡಿ ಮಲ್ಲಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಅವರ ಪ್ರತಿಮೆಗಳನ್ನು ಅಪೇಕ್ಷೆ ಇದ್ದರೆ ಅದಕ್ಕೆ ಯಾರು ವಿರೋಧ ವ್ಯಕ್ತಪಡಿಸಬಾರದು. ಅವರೆಲ್ಲ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಎಂದು ತನ್ವೀರ್ ಸೇಠ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ:ಮೋದಿ ಸ್ಟೇಡಿಯಂ ಹೆಸರು ಬದಲು, 10 ಲಕ್ಷ ಉದ್ಯೋಗ: ಕಾಂಗ್ರೆಸ್ ಗುಜರಾತ್ ಚುನಾವಣೆ ಪ್ರಣಾಳಿಕೆ ಬಿಡುಗಡೆ