ಬೆಂಗಳೂರು:ಪ್ರವಾಹ - ಬರ ಎರಡನ್ನೂ ಕರ್ನಾಟಕ ರಾಜ್ಯ ಎದುರಿಸುತ್ತಿದ್ದು, ಹವಾಮಾನ ವೈಪರೀತ್ಯಕ್ಕೆ ಸುದೀರ್ಘ ಪರಿಹಾರ ಬೇಕಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.
ನಗರದಲ್ಲಿಂದು ಹವಾಮಾನ ವೈಪರೀತ್ಯ ಕೃಷಿಯ ಮೇಲೆ ಬೀರುವ ಪ್ರಭಾವ ಹಾಗೂ ಭವಿಷ್ಯದಲ್ಲಿ ಕೃಷಿ ವಿಭಾಗದಲ್ಲಿ ಮಾಡಬೇಕಾದ ಸುಧಾರಣೆಗಳ ಬಗ್ಗೆ ಎನರ್ಜಿ ಹಾಗೂ ರಿಸೋರ್ಸ್ ಇನ್ಸ್ಟಿಟ್ಯೂಟ್ ಮತ್ತು ಆಸೋಚಮ್ ಸಂಸ್ಥೆ ವಿಚಾರ ಸಂಕಿರಣ ಆಯೋಜಿಸಿದ್ದು, ಮುಖ್ಯಮಂತ್ರಿ ಈ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಹವಾಮಾನ ವೈಪರೀತ್ಯಕ್ಕೆ ಸುದೀರ್ಘ ಪರಿಹಾರ ಬೇಕಿದೆ: ಸಿಎಂ ಬಿಎಸ್ವೈ ಹವಾಮಾನ ವೈಪರೀತ್ಯ ಕೇವಲ ಕೃಷಿಯ ಮೇಲೆ ಪ್ರಭಾವ ಬೀರದೇ ಆರ್ಥಿಕತೆಯ ಮೇಲೂ ಪ್ರಭಾವ ಬೀರಲಿದೆ. ಬರ ಮತ್ತು ಪ್ರವಾಹ ಮುಂದಿನ ದಿನದಲ್ಲಿ ಇನ್ನೂ ಹೆಚ್ಚಾಗಲಿದೆ. ಹೀಗಾಗಿ ಸುಧಾರಿತ ಕೃಷಿ ವಿಧಾನಗಳ ಮೂಲಕ ಹವಾಮಾನ ವೈಪರೀತ್ಯದ ಪರಿಣಾಮವನ್ನು ಎದುರಿಸುವ ಬಗ್ಗೆ ಚರ್ಚೆ ಏರ್ಪಡಿಸಲಾಗಿತ್ತು.
ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ಹವಾಮಾನ ವೈಪರೀತ್ಯಕ್ಕೆ ಸುದೀರ್ಘ ಪರಿಹಾರ ಬೇಕಾಗಿದೆ. ರಾಜಸ್ಥಾನದ ಬಳಿಕ ಅತಿಹೆಚ್ಚು ಒಣಭೂಮಿ ಇರುವ ಎರಡನೇ ರಾಜ್ಯ ಕರ್ನಾಟಕ ಎಂದರು. ಇನ್ನೂ ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಶ್ರೀನಿವಾಸ್ ರೆಡ್ಡಿ ಮಾತನಾಡಿ, ಹವಾಮಾನ ವೈಪರೀತ್ಯದ ಪರಿಣಾಮ ಮುಂದಿನ ದಿನಗಳಲ್ಲಿ ಹೆಚ್ಚಾಗಲಿದ್ದು, ಇದನ್ನು ಎದುರಿಸಿ ಕೃಷಿ ವಿಧಾನ ಅಳವಡಿಸುವ ಬಗ್ಗೆ ಚರ್ಚೆ ನಡೆಯಲಿದೆ. ಪ್ಯಾರಿಸ್ ಒಪ್ಪಂದದಂತೆ, ಗ್ರೀನ್ ಗ್ಯಾಸ್ ಹೊರಸೂಸುವಿಕೆಯ ಪ್ರಮಾಣ ಕಡಿಮೆ ಮಾಡಬೇಕಿದೆ. ನಮ್ಮ ದೇಶದಿಂದಲೂ ಶೇಕಡಾ ಮೂರರಷ್ಟು ಗ್ರೀನ್ ಗ್ಯಾಸ್ ವಾತಾವರಣಕ್ಕೆ ಬಿಡುಗಡೆಯಾಗ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಚರ್ಚೆಗಳಾಗಲಿವೆ ಎಂದರು.