ಕರ್ನಾಟಕ

karnataka

ETV Bharat / state

ಎಸ್​ಎಸ್​ಸಿ ಪರೀಕ್ಷೆ ಕನ್ನಡದಲ್ಲಿ ನಡೆಸಿ, ಕೋಟಿ ಕನ್ನಡಿಗರಿಗೆ ಅನ್ನದ ದಾರಿ ತೋರಿಸಿ: ಎಚ್​​ಡಿಕೆ ಸವಾಲು! - ಕನ್ನಡಿಗರ ಹಕ್ಕುಗಳಿಗೆ ಮರಣಶಾಸನ

ಕನ್ನಡ ವಿರೋಧಿ ಆದೇಶ ಹಿಂಪಡೆದು, ಹೊಸ ಆದೇಶ ಹೊರಡಿಸಿ ಕನ್ನಡವೂ ಸೇರಿ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ, ಬೀದಿಗಿಳಿದು ಕನ್ನಡಿಗರ ಶಕ್ತಿ ಏನೆಂದು ತೋರಿಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಎಸ್​ಎಸ್​ಸಿ ಪರೀಕ್ಷೆ ಕನ್ನಡದಲ್ಲಿ ನಡೆಸಿ, ಕೋಟಿ ಕನ್ನಡಿಗರಿಗೆ ಅನ್ನದ ದಾರಿ ತೋರಿಸಿ: ಎಚ್​​ಡಿಕೆ
Conduct SSC exam in Kannada HDK

By

Published : Oct 29, 2022, 1:26 PM IST

ಬೆಂಗಳೂರು :ಕನ್ನಡದ ಕತ್ತು ಹಿಚುಕುವುದನ್ನೇ ನಿತ್ಯ ಕಾಯಕ ಮಾಡಿಕೊಂಡಿರುವ ಕೇಂದ್ರದ ಬಿಜೆಪಿ ಸರಕಾರದ ಆಡಳಿತಕ್ಕೆ ದೇಶದ ಎಲ್ಲ ಪ್ರಾದೇಶಿಕ ಭಾಷೆಗಳನ್ನು ಮುಗಿಸಲೇಬೇಕು ಎನ್ನುವ ಹಪಾಹಪಿ, ತವಕ, ಹಠ ಉತ್ಕಟವಾಗಿದೆ ಎನ್ನುವುದಕ್ಕೆ ಇಲ್ಲಿದೆ ಹೊಸ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಪೇದೆ ಆಯ್ಕೆಗೆ ಅರ್ಜಿ ಕರೆದಿರುವ ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗ (ಎಸ್​ಎಸ್​ಸಿ) ಹಿಂದಿ, ಇಂಗ್ಲೀಷಿನಲ್ಲಿ ಮಾತ್ರ ಪರೀಕ್ಷೆ ಬರೆಯುವ ಅವಕಾಶ ನೀಡಿದೆ. ಹಾಗಾದರೆ, ಕನ್ನಡವೂ ಸೇರಿ ಇತರೆ ಪ್ರಾದೇಶಿಕ ಭಾಷೆಗಳನ್ನು ಮಾತನಾಡುವ ಅಭ್ಯರ್ಥಿಗಳು ಏನು ಮಾಡಬೇಕು? ಹಿಂದಿಗೆ ಬೆಣ್ಣೆ, ಕನ್ನಡಕ್ಕೆ ಸುಣ್ಣ!! ಇದೆಂಥಾ ನ್ಯಾಯ? ಎಂದು ಪ್ರಶ್ನಿಸಿದ್ದಾರೆ.

ಜನವರಿಯಲ್ಲಿ ನಡೆಯಲಿರುವ ಪರೀಕ್ಷೆ:ಗಡಿ ಭದ್ರತಾ ಪಡೆ, ಕೇಂದ್ರೀಯ ಕೈಗಾರಿಕಾ ಪಡೆ, ಕೇಂದ್ರ ಪೊಲೀಸ್ ಮೀಸಲು ಪಡೆ, ಇಂಡೋ ಟಿಬೆಟಿಯನ್ ಗಡಿ ಪೊಲೀಸ್, ಸಶಸ್ತ್ರ ಸೀಮಾಬಲ, ಸಚಿವಾಲಯ ಭದ್ರತಾ ಪಡೆ, ಅಸ್ಸಾಂ ರೈಫಲ್ಸ್, ಮಾದಕ ವಸ್ತು ನಿಯಂತ್ರಣಾ ಇಲಾಖೆ ಸೇರಿ ಹಲವು ವಿಭಾಗಗಳಿಗೆ ಪೇದೆಗಳ ಆಯ್ಕೆಗೆ ಜನವರಿಯಲ್ಲಿ ಪರೀಕ್ಷೆ ನಡೆಯಲಿದೆ.

ಈ ಪರೀಕ್ಷೆ ಕೇವಲ ಹಿಂದಿ, ಇಂಗ್ಲಿಷ್​​​ನಲ್ಲಿ ಮಾತ್ರ ಇರುತ್ತದೆ. ಅಲ್ಲಿಗೆ ಹಿಂದಿ ಭಾಷಿಕರು ಬಿಟ್ಟರೆ ಬೇರೆ ಯಾರೂ ಆಯ್ಕೆ ಆಗಲೇಬಾರದು ಎನ್ನುವ ಹುನ್ನಾರ ಇದರಲ್ಲಿ ಅಡಗಿದೆ. ನನ್ನ ಅಭಿಪ್ರಾಯದಲ್ಲಿ, ಇದು ಕನ್ನಡ ವಿರೋಧಿ ಅಷ್ಟೇ ಅಲ್ಲ; ಭಾರತವನ್ನು ಉತ್ತರ, ದಕ್ಷಿಣ ಎಂದು ವಿಭಜಿಸಲು ಕೇಂದ್ರ ಬಿಜೆಪಿ ಸರಕಾರವೇ ಕೊಡುತ್ತಿರುವ ಕುಮ್ಮಕ್ಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಕೂಡಲೇ ಕನ್ನಡ ವಿರೋಧಿ ಆದೇಶ ಹಿಂಪಡೆಯಬೇಕು:ಕೇಂದ್ರದ ಬಿಜೆಪಿ ಸರಕಾರ ಈ ಅಪಾಯದ ಅರಿವು ಮಾಡಿಕೊಂಡು, ಕೂಡಲೇ ಈ ಕನ್ನಡ ವಿರೋಧಿ ಆದೇಶ ಹಿಂಪಡೆದು, ಹೊಸ ಆದೇಶ ಹೊರಡಿಸಿ ಕನ್ನಡವೂ ಸೇರಿ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ, ಬೀದಿಗಿಳಿದು ಕನ್ನಡಿಗರ ಶಕ್ತಿ ಏನೆಂದು ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೋಟಿ ಕಂಠ ಗಾಯನ ಎಂದರೆ ಕೋಟಿಗೂ ಹೆಚ್ಚು ಕನ್ನಡ ಕಂಠಗಳಿಗೆ ಜೀವ ತುಂಬುವುದು, ಅನ್ನದ ದಾರಿ ತೋರಿಸುವುದು, ಬದುಕಿನ ಖಾತರಿ ಕೊಡುವುದು. ಕೇವಲ ನಾಲಿಗೆ ಮೇಲೆ ಕನ್ನಡ ಎಂದು ಹೇಳಿ, ಮನದಾಳದಲ್ಲಿ ಅದೇ ಕನ್ನಡದ ಮೇಲೆ ವಿಷ ಕಕ್ಕುವುದಲ್ಲ. ಅದನ್ನು ಕನ್ನಡಿಗರು ಎಂದಿಗೂ ಸಹಿಸುವುದೂ ಅಲ್ಲ. ನಿನ್ನೆಯಷ್ಟೇ ಕೋಟಿ ಕಂಠ ಗಾಯನ ಕಾರ್ಯಕ್ರಮ ಮಾಡಿದ ರಾಜ್ಯ ಬಿಜೆಪಿ ಸರಕಾರ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಏನು ಹೇಳುತ್ತದೆ? ಕೋಟಿ ಕಂಠ ಗಾಯನ ಎನ್ನುತ್ತಲೇ ಕನ್ನಡದ ಕತ್ತು ಸೀಳುವುದಾ? ಕನ್ನಡಿಗರ ಅನ್ನ ಕಸಿದುಕೊಳ್ಳುವುದಾ? ಕನ್ನಡಿಗರ ಹಕ್ಕುಗಳಿಗೆ ಮರಣಶಾಸನ ಬರೆಯುವುದಾ? ಕನ್ನಡಿಗರಿಗೆ ಬೇಕಿದೆ ಉತ್ತರ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಿಎಸ್ಐ ಅಕ್ರಮದಲ್ಲಿ ರಾಜಕಾರಣಿಗಳಿದ್ದರೂ ತನಿಖೆ ಆಗಲಿ, ಹಾದಿ ತಪ್ಪಬಾರದು: ಎಚ್​ಡಿಕೆ ಆಗ್ರಹ

ABOUT THE AUTHOR

...view details