ಬೆಂಗಳೂರು: ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ನಡೆಸುವುದನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡದಲ್ಲಿ ಪ್ರವೇಶ ಪರೀಕ್ಷೆ ನಡೆಸುವಂತೆ ಈ ಹಿಂದೆ ಒತ್ತಾಯಿಸಿದ್ದೆ. ಅಗತ್ಯ ಬಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾಷಾ ಮಾಧ್ಯಮವನ್ನು ಮರುಪರಿಶೀಲಿಸುವಂತೆ ಪ್ರಧಾನಿ ಮೋದಿಗೆ ಮತ್ತೊಮ್ಮೆ ಪತ್ರ ಬರೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಆಯೋಜನೆ ಮಾಡಿದ್ದ 68ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. "ಕೇಂದ್ರ ಸರ್ಕಾರ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತದೆ. ಅದನ್ನು ನಾವು ವಿರೋಧಿಸಬೇಕು ಎಂದು ಶಿವಾಜಿ ನಗರ ಶಾಸಕ ರಿಜ್ವಾನ್ ಆರ್ಷದ್ ಅವರು ಸರಿಯಾಗಿಯೇ ಹೇಳಿದ್ದಾರೆ. ನಮ್ಮ ಮಕ್ಕಳು ಅವರಿಗೆ ತಿಳಿದಿರುವ ಭಾಷೆಯಲ್ಲಿ ಪರೀಕ್ಷೆಗಳನ್ನು ಬರೆಯುವಂತಾಗಬೇಕು. ಭಾಷಾ ಮಾಧ್ಯಮ ಮರು ಪರಿಶೀಲಿಸುವಂತೆ ನಾನು ನಮ್ಮ ಪ್ರಧಾನಿ ಅವರಿಗೆ ಮನವಿ ಮಾಡುತ್ತೇನೆ" ಎಂದರು.
"ಸರ್ಕಾರಿ ಶಾಲೆಗಳಲ್ಲಿ ಮಾತ್ರ ಕನ್ನಡ ಬೋಧನಾ ಮಾಧ್ಯಮವಾಗಿದೆಯೇ ಹೊರತು ಖಾಸಗಿ ಶಾಲೆಗಳಲ್ಲಿ ಅಲ್ಲ. ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಮಾತ್ರ ಪ್ರತಿಭಾವಂತರು ಹಾಗೂ ತಕ್ಕುದಾದ ಉದ್ಯೋಗವನ್ನು ಗಿಟ್ಟಿಸಿಕೊಳ್ಳುತ್ತಾರೆ ಎನ್ನುವ ತಪ್ಪು ಕಲ್ಪನೆ ಜನರಲ್ಲಿದೆ" ಎಂದು ಸಿಎಂ ವಿಷಾದ ವ್ಯಕ್ತಪಡಿಸಿದರು.