ಬೆಂಗಳೂರು :ಮಾಜಿ ಶಾಸಕ ಮಳ್ಳೂರ್ ಆನಂದರಾವ್ ಅವರ ನಿಧನಕ್ಕೆ ವಿಧಾನಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಸಂತಾಪ ಸೂಚನೆ ನಿರ್ಣಯವನ್ನು ಸದನದಲ್ಲಿ ಮಂಡಿಸಿದರು.
ವಿಧಾನಸಭೆಯ ಮಾಜಿ ಸದಸ್ಯರಾಗಿದ್ದ ಮಳ್ಳೂರ್ ಆನಂದರಾವ್ ಅವರು 1935, ಅಕ್ಟೋಬರ್ 2 ರಂದು ಶಿಡ್ಲಘಟ್ಟದಲ್ಲಿ ಜನಿಸಿದ್ದು, ಎಂ.ಎ., ಬಿ.ಇಡಿ ಪದವೀಧರರಾಗಿದ್ದರು. ವೃತ್ತಿಯಲ್ಲಿ ಕೃಷಿಕರಾಗಿದ್ದು ಹೈನುಗಾರಿಕೆ ನಡೆಸುತ್ತಿದ್ದರು.
ಕರ್ನಾಟಕ ರಾಜ್ಯ ಆಗಮತ್ರಯ ಮಹಾಮಂಡಳ, ಕರ್ನಾಟಕ ಇ.ಎಸ್.ಐ. ಎಂಪ್ಲಾಯಿಸ್ ಅಸೋಸಿಯೇಷನ್, ಕರ್ನಾಟಕ ಶಾಖೆಯ ಆಲ್ ಇಂಡಿಯಾ ಫೆಡರೇಷನ್ ಆಫ್ ಯುನೈಟೆಡ್ ನೇಷನ್ಸ್ ಅಸೋಸಿಯೇಷನ್ಸ್ ಹಾಗೂ ಹೊಟೇಲ್ ವರ್ಕ್ರ್ಸ್ ಆ್ಯಂಡ್ ಓನರ್ ಕಲ್ಯಾಣ ಸಮಿತಿಯ ಅಧ್ಯಕರಾಗಿ, ಮೈಸೂರು ಸ್ಟೇಟ್ ಸೆಕೆಂಡರಿ ಟೀಚರ್ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿಯಾಗಿ, ಆಲ್ ಇಂಡಿಯಾ ಸೆಕೆಂಡರಿ ಟೀಚರ್ ಫೆಡರೇಷನ್, ದೆಹಲಿ ಹಾಗೂ ಭಾರತೀಯ ಶಿಕ್ಷಣ ಮಂಡಳಿ, ಮುಂಬೈ ಇವುಗಳ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
ಯೋಗಾಸನ, ಕುಸ್ತಿ ಮತ್ತು ಕಬಡ್ಡಿಯಲ್ಲಿ ಆಸಕ್ತಿ ಹೊಂದಿದ್ದ ಅವರು, 1978ರಲ್ಲಿ ಆರನೇ ವಿಧಾನಸಭೆಗೆ ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಗೊಂಡಿದ್ದರು. 1970 ರಿಂದ 1976 ರವರೆಗೆ ವಿಧಾನಪರಿಷತ್ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಹಿರಿಯ ರಾಜಕಾರಣಿ ಮಳ್ಳೂರ್ ಆನಂದ ರಾವ್ ಅವರು ದಿನಾಂಕ 14.02.2022 ರಂದು ನಿಧನ ಹೊಂದಿರುತ್ತಾರೆ ಎಂದು ಸ್ಪೀಕರ್ ಸದನಕ್ಕೆ ತಿಳಿಸಿದರು.
ನಂತರ ಸಂತಾಪ ಸೂಚನೆ ನಿರ್ಣಯದ ಮೇಲೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಮಳ್ಳೂರ್ ಆನಂದರಾವ್ ವಿಶೇಷವಾದ ವ್ಯಕ್ತಿ. ಆರ್ಎಸ್ಎಸ್ ನ ನಾಯಕರಾಗಿದ್ದ ಅವರು, ಅಂದಿನ ಯುವಕರಿಗೆ ಸ್ಫೂರ್ತಿಯಾಗಿದ್ದರು. ಯೋಗಾಸನ, ಕುಸ್ತಿಪಟು ಆಗಿದ್ದ ಅವರು ಕಬ್ಬಡ್ಡಿ ಆಟದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು ಎಂದು ಹೇಳಿದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ವೃತ್ತಿಯಲ್ಲಿ ಕೃಷಿಕರಾಗಿದ್ದ ಮಳ್ಳೂರ್ ಆನಂದರಾವ್, ಮೌಲ್ಯಾಧಾರಿತ ರಾಜಕಾರಣ ಮಾಡಿದ್ದರು. ನಮಗೆಲ್ಲರಿಗೂ ಅವರು ಆದರ್ಶ ಆಗುತ್ತಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು. ಸಂತಾಪ ನಿರ್ಣಯದ ಮೇಲೆ ಜೆಡಿಎಸ್ ಉಪ ನಾಯಕ ಬಂಡೆಪ್ಪ ಕಾಶೆಂಪೂರ್, ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕ ಸುರೇಶ್ ಕುಮಾರ್ ಮತ್ತಿತರರು ಮಾತನಾಡಿದರು.
ಇದನ್ನು ಓದಿ:17 ಬಾರಿ ವಿವಾಹವಾಗಿ ನಾನವನಲ್ಲ.. ನಾನವನಲ್ಲ.. ಎನ್ನುತ್ತಿದ್ದಾನೆ ಆಸಾಮಿ!