ಬೆಂಗಳೂರು:ವಿಧಾನ ಪರಿಷತ್ ಮತ್ತು ವಿಧಾನಸಭೆ ಕಲಾಪಗಳ ಆರಂಭದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸಲ್ಲಿಸಲಾಯಿತು. ಸಭಾಧ್ಯಕ್ಷರು ಸಂತಾಪ ಸೂಚನಾ ಪ್ರಸ್ತಾಪ ಮಂಡಿಸಿ, ಅಗಲಿದ ಗಣ್ಯರ ಪರಿಚಯ ಮಾಡಿಕೊಟ್ಟರು.
ವಿಧನಾಸಭಾ ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂತಾಪ ನಿರ್ಣಯ ಮಂಡಿಸಿದರು. ನಿರ್ಣಯದ ಪರ ಮಾತನಾಡಿದ ಸಭಾಧ್ಯಕ್ಷರು, ರಾಮಾ ಜೋಯಿಸ್ ಅವರು ರಾಜ್ಯಸಭಾ ಸದಸ್ಯರಾಗಿ ಜಾರ್ಖಂಡ್, ಬಿಹಾರ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದು, ಗುಲ್ಬರ್ಗ ವಿವಿಯಲ್ಲಿ ವಿಜ್ಞಾನೇಶ್ವರ ಪೀಠ, ಭಾರತೀಯ ನ್ಯಾಯ ದರ್ಶನ ಮತ್ತು ರಾಜಧರ್ಮ ಸ್ನಾತಕೋತ್ತರ ಸ್ಥಾಪನೆ ಮಾಡಿದ್ದರು ಎಂದು ಸ್ಮರಿಸಿದರು.
ಕವಿ ಲಕ್ಷ್ಮೀನಾರಾಯಣ ಭಟ್ಟರು ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ , ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ವಿಜ್ಞಾನಿ ಎಂ.ಮಹದೇವಪ್ಪ ಭತ್ತದ ಮಹದೇವ ಎಂದೇ ಪ್ರಖ್ಯಾತರಾಗಿದ್ದರು. ಇವರೆಲ್ಲರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ ಎಂದು ಬಣ್ಣಿಸಿದರು.
ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬಿಜೆಪಿ ಸದಸ್ಯ ಅರಗ ಜ್ಞಾನೇಂದ್ರ, ಜೆಡಿಎಸ್ ಸದಸ್ಯ ವೆಂಕಟರಾವ್ ನಾಡಗೌಡ ಮತ್ತಿತರರು ಸಂತಾಪ ಸೂಚಿಸಿದರು.
ವಿಧಾನ ಪರಿಷತ್ನಲ್ಲಿ ಅಗಲಿದ ಗಣ್ಯರಿಗೆ ಸಂತಾಪ:
ವಿಧಾನ ಪರಿಷತ್ನಲ್ಲೂ ಅಗಲಿದ ನಾಯಕರಿಗೆ ಸಂತಾಪ ಸೂಚಿಸಲಾಯಿತು. ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಸದನದಲ್ಲಿ ತಮ್ಮ ಸಂತಾಪ ಸಲ್ಲಿಸಿದರು. ಇಬ್ಬರೂ ಅತ್ಯುತ್ತಮ ಸಾಧಕರನ್ನು ರಾಜ್ಯ ಕಳೆದುಕೊಂಡಿದೆ. ಇಬ್ಬರ ಕೊಡುಗೆ ರಾಜ್ಯದ ಪ್ರಗತಿಗೆ, ಜನಪ್ರಿಯತೆಗೆ ಅಪಾರವಾಗಿದೆ ಎಂದು ಅಭಿಪ್ರಾಯಪಟ್ಟರು.
ಸಭಾನಾಯಕರು ಹಾಗೂ ಪ್ರತಿಪಕ್ಷ ನಾಯಕ ಸಂತಾಪ ಸೂಚನೆ ನಂತರ ಮೃತರ ಆತ್ಮಕ್ಕೆ ಶಾಂತಿ ಕೋರಿ, ಅಗಲಿಕೆಯ ನೋವು ಭರಿಸುವ ಶಕ್ತಿ ಅವರ ಕುಟುಂಬ ವರ್ಗಕ್ಕೆ ಪರಮಾತ್ಮ ಕರುಣಿಸಲಿ ಎಂದು ಆಶಿಸಲಾಯಿತು. ಮೃತರ ಗೌರವಾರ್ಥ ಪರಿಷತ್ ಸದಸ್ಯರು ಎದ್ದು ನಿಂತು ಒಂದು ನಿಮಿಷ ಮೌನಾಚರಣೆ ಮಾಡಿದರು.
ನಿಲುವಳಿ ಸೂಚನೆ:ನಿಲುವಳಿ ಸೂಚನೆ ಮಂಡನೆಗೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮನವಿ ಮಾಡಿದರು. ಪ್ರಶ್ನೋತ್ತರ ಅವಧಿ ನಂತರ ಅವಕಾಶ ನೀಡುತ್ತೇನೆ ಎಂದರು. ಪ್ರಸ್ತಾಪ ಮಂಡಿಸುತ್ತೇನೆ. ಆಮೇಲೆ ಚರ್ಚೆಗೆ ಪಡೆಯಿರಿ ಎಂದು ಕೋರಿದರು. ತೀರಾ ಒತ್ತಡ ಹೇರಿದ ನಂತರ ವಿಷಯ ಪ್ರಸ್ತಾಪಕ್ಕೆ ಅವಕಾಶ ನೀಡಲಾಯಿತು.
ಬೆಲೆ ಏರಿಕೆ ಗಗನಕ್ಕೇರಿದೆ. ಬಡವರು ಬದುಕುವುದು ಕಷ್ಟವಾಗಿದೆ. ಸಾರ್ವಜನಿಕ ಬದುಕಿನಲ್ಲಿ ನಾನು ಇಷ್ಡು ದೊಡ್ಡ ಮಟ್ಟದ ಬೆಲೆ ಏರಿಕೆ ಕಂಡಿಲ್ಲ. ಬಡವರು, ಶ್ರಮಿಕರು ಹಾಗೂ ಕಾರ್ಮಿಕ ವರ್ಗಕ್ಕೆ ಬದುಕು ಕಷ್ಟವಾಗಿದೆ. ನಿಯಮ 59 ರ ಅಡಿ ನಿಲುವಳಿ ಸೂಚನೆ ಅಡಿ ಚರ್ಚೆಗೆ ಅವಕಾಶ ನೀಡಿ ಎಂದರು. ನಿಯಮ 68 ರ ಅಡಿ ಚರ್ಚೆಗೆ ತೆಗೆದುಕೊಳ್ಳುವ ಭರವಸೆ ಇತ್ತರು.