ಬೆಂಗಳೂರು:ಮಾಜಿ ಸಚಿವ ಜಿ. ವಿ ಮಂಟೂರ ಅವರ ನಿಧನಕ್ಕೆ ವಿಧಾನಸಭೆಯಲ್ಲಿ ಇಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂತಾಪ ಸೂಚನೆ ನಿರ್ಣಯವನ್ನು ಸದನದಲ್ಲಿ ಮಂಡಿಸಿದರು. ವಿಧಾನಸಭೆಯ ಮಾಜಿ ಸದಸ್ಯರಾಗಿದ್ದ ಜಿ. ವಿ. ಮಂಟೂರ ಅವರು ದಿನಾಂಕ: 15.08.1931 ರಂದು ಜನಿಸಿದ್ದು, ಮೂಲತಃ ಬಾಗಲಕೋಟೆಯ ಖಜ್ಜಿಡೋಣಿಯವರಾಗಿದ್ದರು.
ಬಿಎಸ್ಸಿ ಪದವಿ ಪಡೆದಿದ್ದ ಶ್ರೀಯುತರು ವೃತ್ತಿಯಲ್ಲಿ ಕೃಷಿಕರಾಗಿದ್ದರು. ಬಾಗಲಕೋಟೆ ಅಭಿವೃದ್ಧಿ ಪ್ರಾಧಿಕಾರದ ಸ್ಥಾಪನೆಗೆ ಕಾರಣಕರ್ತರಾಗಿದ್ದರು. ಅವರು ಪ್ರಾಧಿಕಾರದ ಪ್ರಥಮ ಅಧ್ಯಕ್ಷರು ಹಾಗೂ ತಾಲೂಕು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದರು. ಮೌಲ್ಯಾಧಾರಿತ ರಾಜಕಾರಣಿ, ಸಮಾಜ ಸೇವಕ, ಶೈಕ್ಷಣಿಕ ಚಿಂತಕರಾಗಿದ್ದ ಶ್ರೀಯುತರು ಖಜ್ಜಿಡೋಣಿಯಲ್ಲಿ ರೂರಲ್ ಎಜುಕೇಷನ್ ಸೊಸೈಟಿ ಸ್ಥಾಪಿಸಿ ಶಿಕ್ಷಣಕ್ಕೆ ಒತ್ತು ನೀಡಿದ್ದರು.
1983ರಲ್ಲಿ ಏಳನೇ ವಿಧಾನಸಭೆಗೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅವರು, 1985ರಲ್ಲಿ ಎಂಟನೇ ವಿಧಾನಸಭೆಗೆ ಅದೇ ಕ್ಷೇತ್ರದಿಂದ ಪುನರಾಯ್ಕೆಗೊಂಡಿದ್ದರು. ಅಭಿವೃದ್ಧಿ ಹರಿಕಾರ, ಸರಳ ವ್ಯಕ್ತಿತ್ವದ ಹಿರಿಯ ರಾಜಕಾರಣಿ ಜಿ. ವಿ ಮಂಟೂರ ಅವರು ನಿನ್ನೆ ನಿಧನ ಹೊಂದಿರುತ್ತಾರೆ ಎಂದು ಸ್ಪೀಕರ್ ಸದನಕ್ಕೆ ತಿಳಿಸಿ ಸಂತಾಪ ಸೂಚಿಸಿದರು.
ಸಂತಾಪ ನಿರ್ಣಯದ ಮೇಲೆ ಮಾತನಾಡಿದ ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಅವರು, ನಮ್ಮೆಲ್ಲರಿಗೂ ಆತ್ಮೀಯರಾಗಿದ್ದರು. ಮಂಟೂರ ಕಾಕಾ ಎಂದೇ ಅವರನ್ನು ಕರೆಯಲಾಗುತ್ತಿತ್ತು. ಬಹಳ ಗಟ್ಟಿ ಮನುಷ್ಯ. ಶ್ರೀಮಂತ ಕುಟುಂಬದಿಂದ ಬಂದವರು. ಅವರು ಮೊದಲು ಕಾಂಗ್ರೆಸ್ ನಲ್ಲಿ ಇದ್ದರು. ಟಿಕೆಟ್ ಪಡೆಯಲು ದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತ್ತು. ಇದರಿಂದ ಸಿಟ್ಟಿಗೆದ್ದ ಅವರು ಟೋಪಿ ಕೆಳಗಿಟ್ಟು ಗೆದ್ದು ಬರುತ್ತೇನೆ ಎಂದು ಹೇಳಿ ಶಪಥ ಮಾಡಿದ್ದರು.