ಬೆಂಗಳೂರು:ಪಾದರಾಯನಪುರದಲ್ಲಿ ನಡೆದ ಗಲಾಟೆ ಪ್ರಕರಣವನ್ನು ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘ ಖಂಡಿಸಿದೆ. ಇದು ಅಮಾನವೀಯ, ಅತ್ಯಂತ ಖಂಡನೀಯವಾಗಿದೆ. ಪೂರ್ವ ನಿಯೋಜಿತ ಕೃತ್ಯವೂ ಹೌದು. ಇಂತಹ ದುರುಳರ ಹಾಗೂ ನೀಚರ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಲು ಪತ್ರ ಮೂಲಕ ಆಗ್ರಹಿಸಿದೆ.
ಆರೋಗ್ಯ ಸಿಬ್ಬಂದಿ ರಕ್ಷಣೆಗೆ ಸರ್ಕಾರ ನಿಲ್ಲಬೇಕು; ಆರೋಗ್ಯ ಇಲಾಖೆ ನೌಕರರ ಸಂಘ ಆಗ್ರಹ - ಆರೋಗ್ಯ ಇಲಾಖೆಯ ಒಳ-ಹೊರ ಗುತ್ತಿಗೆ ನೌಕರರ ಸಂಘ
ಪಾದರಾಯನಪುರದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಆರೋಗ್ಯ ಇಲಾಖೆಯ ಒಳ-ಹೊರ ಗುತ್ತಿಗೆ ನೌಕರರ ಸಂಘವೂ ಘಟನೆಯನ್ನು ಖಂಡಿಸಿದೆ.
ಈ ಘಟನೆಗೆ ಕುಮ್ಮಕ್ಕು ನೀಡಿರುವುದನ್ನು ಪತ್ತೆ ಮಾಡಿ ಕಠಿಣ ಶಿಕ್ಷೆ ನೀಡಬೇಕು. ಎಲ್ಲಾ ಆರೋಗ್ಯ ಸಿಬ್ಬಂದಿಗೆ ಹಾಗೂ ಕಾರ್ಯಕರ್ತರಿಗೆ ಅಗತ್ಯ ಭದ್ರತೆಯನ್ನು ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ. ಉತ್ತರ ಪ್ರದೇಶ ಸರ್ಕಾರದ ಮಾದರಿಯಲ್ಲಿ ಸಾರ್ವಜನಿಕ ಆಸ್ತಿ ಹಾನಿ ಮಾಡಿದವರ ವಿರುದ್ಧ ಅವರ ಆಸ್ತಿಯನ್ನು ಜಪ್ತಿ ಮಾಡಿ ಸರ್ಕಾರ ವಶಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದೆ.
ಇಡೀ ದೇಶ ಲಾಕ್ಡೌನ್ ಪಾಲನೆ ಮಾಡುತ್ತಿದೆ. ಆದ್ರೆ ಇವರು ಕಾನೂನು ಉಲ್ಲಂಘನೆ ಮಾಡಿ, ತಮ್ಮನ್ನು ರಕ್ಷಿಸಲು ಬಂದವರ ಮೇಲೆ ಹಲ್ಲೆ ಮಾಡಿದ್ದಾರೆ. ಇಂತಹ ಹೀನ ಮನಸ್ಥಿತಿಯವರ ಮೇಲೆ ಸರ್ಕಾರ ಕಾನೂನು ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.