ಬೆಂಗಳೂರು: ನಗರದ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸುಬೇದಾರ್ ಪಾಳ್ಯದಲ್ಲಿ ನೂತನವಾಗಿ ನಿರ್ಮಿಸಿರುವ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಶನಿವಾರ ಉದ್ಘಾಟಿಸಿದರು. ಜೊತೆಯಲ್ಲಿ ಕ್ಷೇತ್ರದ ಶಾಸಕ ಮತ್ತು ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ ಅವರು "ಒಬ್ಬ ಜನಪ್ರತಿನಿಧಿಗೆ ಮನಸ್ಸಿದ್ದರೆ ತಮ್ಮ ಕ್ಷೇತ್ರವನ್ನು ಹೇಗೆ ಮಾದರಿಯಾಗಿ ಅಭಿವೃದ್ಧಿ ಪಡಿಸಬಹುದು ಎನ್ನುವುದಕ್ಕೆ ಅಶ್ವತ್ಥನಾರಾಯಣ ಉದಾಹರಣೆ ಆಗಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ಆರೋಗ್ಯ, ಶಿಕ್ಷಣ, ನಾಗರಿಕ ಸೇವೆಗಳು ಸೇರಿದಂತೆ ಎಲ್ಲವೂ ಸುಗಮವಾಗಿ ನಡೆಯುತ್ತಿವೆ. ಇದು ಕೇವಲ ಹಣ ಮತ್ತು ಶ್ರೀಮಂತಿಕೆಯಿಂದ ಆಗುವುದಿಲ್ಲ.
ಇದಕ್ಕೆ ಜನಪರವಾದ ಕಳಕಳಿ ಬೇಕಾಗುತ್ತದೆ. ಇದು ಇಡೀ ಬೆಂಗಳೂರಿನ ಜನಪ್ರತಿನಿಧಿಗಳಿಗೆ ಆದರ್ಶಪ್ರಾಯವಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಅಶ್ವತ್ಥ ನಾರಾಯಣ್ ವಹಿಸಿದ ಪಾತ್ರವು ಅನುಕರಣೀಯವಾಗಿದೆ ಎಂದು ಬಿಎಸ್ವೈ ಮೆಚ್ಚುಗೆಯ ಮಾತುಗಳನ್ನಾಡಿದರು.
220 ಪರೀಕ್ಷೆಗಳು ಲಭ್ಯ:ಈ ಸಂದರ್ಭದಲ್ಲಿ ಸಚಿವ ಅಶ್ವತ್ಥನಾರಾಯಣ ಮಾತನಾಡಿ, ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಾಖಲೆಗಳ ಅವಶ್ಯಕತೆ ಇಲ್ಲ. ಯಾರು ಬೇಕಾದರೂ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಇಲ್ಲಿ 220 ತರಹದ ಪರೀಕ್ಷೆಗಳು ಲಭ್ಯವಿವೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಕರೆ ನೀಡಿದರು.