ಕರ್ನಾಟಕ

karnataka

ETV Bharat / state

ನವೆಂಬರ್​ 22 ರ ಒಳಗೆ ಕೆಲಸ ಮುಗಿಸಿ... ಅಧಿಕಾರಿಗಳಿಗೆ ಬಿಡಿಎ ಅಧ್ಯಕ್ಷ ವಿಶ್ವನಾಥ್ ಸೂಚನೆ - ಕೆರೆ ಹೂಳೆತ್ತುವ ಕಾರ್ಯ

2022ರ ನವೆಂಬರ್ ಒಳಗೆ ಕಾಮಗಾರಿಯನ್ನು ಹಾಗೂ ವರ್ತೂರು ಕೆರೆಯ ಹೂಳೆತ್ತುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಬಿಡಿಎ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ನಿರ್ದೇಶನ ನೀಡಿದ್ದಾರೆ.

bda
bda

By

Published : Jun 22, 2021, 8:37 PM IST

Updated : Jun 22, 2021, 8:56 PM IST

ಬೆಂಗಳೂರು:ಬೆಳ್ಳಂದೂರು ಕೆರೆ ಹೂಳೆತ್ತುವ ಕಾರ್ಯವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕೆಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಮಂಗಳವಾರ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಮತ್ತು ಬಿಡಿಎ ಆಯುಕ್ತ ರಾಜೇಶ್ ಗೌಡರೊಂದಿಗೆ ಬೆಳ್ಳಂದೂರು ಮತ್ತು ವರ್ತೂರು ಕೆರೆಯ ಹೂಳೆತ್ತುವ ಕಾಮಗಾರಿ ಹಾಗೂ ದೊಡ್ಡಬನಹಳ್ಳಿ ಮತ್ತು ಗುಂಜೂರು ವಸತಿ ಸಮುಚ್ಛಯಗಳಿಗೆ ಭೇಟಿ ನೀಡಿದ ನಂತರ ವಿಶ್ವನಾಥ್ ತಿಳಿಸಿದರು.

ಬೆಳ್ಳಂದೂರು ಕೆರೆಯ ಹೂಳೆತ್ತುವುದು ಮತ್ತು ಇನ್ನಿತರ ಕಾಮಗಾರಿಗಳಿಗೆ ಎಂದು 100 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದ್ದು, ಇನ್ನೂ ಹೆಚ್ಚು ಯಂತ್ರೋಪಕರಣಗಳು ಮತ್ತು ಮಾನವ ಸಂಪನ್ಮೂಲವನ್ನು ಬಳಸಿಕೊಂಡು ನಿಗದಿತ ಸಮಯದೊಳಗೆ 2022ರ ನವೆಂಬರ್ ಒಳಗೆ ಕಾಮಗಾರಿಯನ್ನು ಹಾಗೂ ವರ್ತೂರು ಕೆರೆಯ ಹೂಳೆತ್ತುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಬಿಡಿಎ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.

ಎಲ್ಲ ಅಪಾರ್ಟ್​ಮೆಂಟ್​ಗಳಿಗೆ ಓಪನ್ ಜಿಮ್:

ದೊಡ್ಡಬನಹಳ್ಳಿ ಬಿಡಿಎ ವಸತಿ ಸಂಕೀರ್ಣಗಳಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳಿಂದ ಅಹವಾಲುಗಳನ್ನು ಸ್ವೀಕರಿಸಿದ ವಿಶ್ವನಾಥ್, ಕೂಡಲೇ ವಸತಿ ಸಂಕೀರ್ಣದಲ್ಲಿರುವ ಸಮಸ್ಯೆಗಳನ್ನು ನಿವಾರಣೆ ಮಾಡಲು ಕ್ರಮ ಕೈಗೊಳ್ಳಬೇಕು ಮತ್ತು ನಿವಾಸಿಗಳ ಸಂಘಕ್ಕೆ ಕಚೇರಿಯನ್ನು ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಡಿಎ ನಿರ್ಮಾಣ ಮಾಡಿರುವ ಬಹುತೇಕ ಎಲ್ಲ ಅಪಾರ್ಟ್​ಮೆಂಟ್​ಗಳಿಗೆ ಓಪನ್ ಜಿಮ್ ಮತ್ತು ಮಕ್ಕಳ ಆಟೋಟಗಳಿಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಓಪನ್ ಜಿಮ್​ನಲ್ಲಿ ಸೌಲಭ್ಯಗಳನ್ನು ಕಲ್ಪಿಸಲು ಸದ್ಯದಲ್ಲಿಯೇ ಪ್ರಾಧಿಕಾರ ಅನುಮೋದನೆ ನೀಡಲಿದೆ ಎಂದು ಭರವಸೆ ನೀಡಿದರು.

ಗುಂಜೂರು ಸಮಸ್ಯೆ ನಿವಾರಣೆಗೆ ಆಗಸ್ಟ್ 15 ಗಡುವು:

ಗುಂಜೂರು ವಸತಿ ಸಂಕೀರ್ಣದಲ್ಲಿ ವಾಸವಾಗಿರುವ ನಿವಾಸಿಗಳ ಅಹವಾಲು ಸ್ವೀಕರಿಸಿದ ವಿಶ್ವನಾಥ್, ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಕೂಡಲೇ ಎರಡು ಬೋರ್ ​ವೆಲ್​ಗಳನ್ನು ಹಾಕಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಶಾಶ್ವತ ವಿದ್ಯುತ್ ಸಂಪರ್ಕ, ಕಸ ವಿಲೇವಾರಿ, ಕಾಂಪೌಂಡ್ ನಿರ್ಮಾಣ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಆಗಸ್ಟ್ 15ರೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಗಡುವು ವಿಧಿಸಿದರು.

ಗುತ್ತಿಗೆದಾರರಿಗೆ ಎಚ್ಚರಿಕೆ:

ಈ ವೇಳೆ, ಕಾಮಗಾರಿ ವಿಳಂಬ ಮತ್ತು ಲೋಪಗಳು ಕಂಡು ಬಂದರೆ ಅಂತಹ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಿ:

ಈ ವೇಳೆ, ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ, ದೊಡ್ಡಬನಹಳ್ಳಿ, ಗುಂಜೂರು, ಬೆಳ್ಳಂದೂರು ಮತ್ತು ವರ್ತೂರು ಕೆರೆಗಳು ತಮ್ಮ ಮತಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಇಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Last Updated : Jun 22, 2021, 8:56 PM IST

ABOUT THE AUTHOR

...view details