ಬೆಂಗಳೂರು :ಅಪೆಂಡಿಕ್ಸ್ ಸಿ ಯೋಜನೆಯಡಿ ಬಾಕಿ ಉಳಿದಿರುವ ಸುಮಾರು 8ಸಾವಿರ ಕೋಟಿ ರೂ.ಅಂದಾಜು ವೆಚ್ಚದ 16,000 ಕಿ.ಮೀ ರಸ್ತೆ ಕಾಮಗಾರಿಯನ್ನು ಜುಲೈ ಮೊದಲ ವಾರದಲ್ಲಿ ಆರಂಭಿಸಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜುಲೈ ತಿಂಗಳಲ್ಲಿ ರಸ್ತೆ ಕಾಮಗಾರಿ ಆರಂಭವಾಗಲಿದೆ. ಮೂರು ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಳಿಸಲಾಗುತ್ತದೆ. ಮೈಸೂರು - ಬೆಂಗಳೂರು ನಡುವೆ ಹತ್ತು ಪಥದ ರಸ್ತೆ ನಿರ್ಮಾಣದ ಮೊದಲ ಹಂತದ ಕಾಮಗಾರಿ ಆರಂಭವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಶೇ.100ರಷ್ಟು ಭೂಸ್ವಾಧೀನ ಮಾಡಿ ಕೊಡಲಾಗಿದೆ. ರಾಮನಗರ, ಮಂಡ್ಯ, ಮದ್ದೂರು ನಗರಗಳ್ಲಿ ಎಲಿವೇಟೆಡ್ ರಸ್ತೆ ನಿರ್ಮಾಣವಾಗಬೇಕೆಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.