ಬೆಂಗಳೂರು: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಮನೆ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ದಾಳಿ ಮುಕ್ತಾಯಗೊಂಡರೂ ಮನೆಯಿಂದ ಹೊರಗಡೆ ಬರದೆ ಜಮೀರ್ ವಿಶ್ರಾಂತಿ ಮೊರೆ ಹೋಗಿದ್ದಾರೆ.
ದಾಳಿ ಮುಕ್ತಾಯಗೊಳ್ಳುತ್ತಿದ್ದಂತೆ ಅಭಿಮಾನಿಗಳು ನಿವಾಸ ಬಳಿ ದೌಡಾಯಿಸುತ್ತಿದ್ದು ಮನೆಯ ಸಿಬ್ಬಂದಿ ಸಾಹೇಬ್ರು ಅವರು ರೆಸ್ಟ್ನಲ್ಲಿದ್ದಾರೆ ಎಂದು ಹೇಳಿ ಕಳುಹಿಸುತ್ತಿದ್ದಾರೆ. ಐಎಂಎ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಮನ್ಸೂರ್ ಖಾನ್ನೊಂದಿಗೆ ಹಣಕಾಸು ವ್ಯವಹಾರಗಳಲ್ಲಿ ಭಾಗಿಯಾಗಿರುವ ಶಂಕೆ ಮೇರೆಗೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಭವ್ಯ ಬಂಗಲೆಯಂತಿರುವ ಮನೆಯನ್ನು ಒಂದು ದಿನಗಳ ಕಾಲ ಪರಿಶೀಲನೆ ನಡೆಸಿದ್ದರು. ಜಮೀರ್ ಸಹೋದರರನ್ನು ವಿಚಾರಣೆಗೆ ಒಳಪಡಿಸಿದ್ದರು. ದಾಳಿ ಅಂತ್ಯದ ವೇಳೆ ಅಗತ್ಯವಾದಲ್ಲಿ ವಿಚಾರಣೆ ಬರಬೇಕು ಎಂದು ಇಡಿ ಅಧಿಕಾರಿಗಳು ಸೂಚಿಸಿದ ಹಿನ್ನೆಲೆಯಲ್ಲಿ ತಮ್ಮ ವಕೀಲನ್ನು ಭೇಟಿ ಮಾಡಿ ಮುಂದಿನ ದಿನಗಳಲ್ಲಿ ನೀಡುವ ಇಡಿ ನೋಟಿಸ್ ಹೇಗೆ ಉತ್ತರಿಸಬೇಕು? ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬುದರ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ದಾಳಿಗೆ ಕಾರಣ:ಜಮೀರ್ ಸಾಮ್ರಾಜ್ಯದ ಮೇಲೆ ಇಡಿ ದಾಳಿ ನಡೆಸಲು ಪ್ರಮುಖ ಕಾರಣ ಮನ್ಸೂರ್ನೊಂದಿಗೆ ಹೊಂದಿದ್ದ ವ್ಯವಹಾರಿಕ ಸಂಬಂಧ. ಹಲವು ವರ್ಷಗಳಿಂದ ಇಬ್ಬರು ಸಹ ಪರಸ್ಪರ ವ್ಯವಹಾರದಲ್ಲಿ ಭಾಗಿಯಾಗಿ ಹಣ ವರ್ಗಾವಣೆ ನಡೆಸುತ್ತಿದ್ದರು. ರಿಚ್ಮಂಡ್ ಟೌನ್ ಬಳಿಯಿರುವ ಜಮೀರ್ ನಿವೇಶನವನ್ನು ಮಾರುಕಟ್ಟೆ ದರಕ್ಕಿಂತ ಐದು ಪಟ್ಟು ಹೆಚ್ಚು ಹಣಕ್ಕೆ ನೀಡಿರುವುದಾಗಿ ಸಿಬಿಐ ತನಿಖೆ ವೇಳೆ ಮನ್ಸೂರ್ ಹೇಳಿಕೆ ನೀಡಿದ್ದ. ಜೊತೆಗೆ ಜಮೀರ್ ಮಗಳ ಮದುವೆ ಹಿನ್ನೆಲೆಯಲ್ಲಿ ಕೊಟ್ಯಂತರ ರೂಪಾಯಿ ಬಂಗಾರವನ್ನು ಸಹ ನೀಡಿರುವುದಾಗಿ ತಿಳಿಸಿದ್ದ. ಮನ್ಸೂರ್ನಿಂದ ಪಡೆದ ಹಣವನ್ನು ಟ್ರಾವೆಲ್ ವ್ಯವಹಾರ, ರಿಯಲ್ ಎಸ್ಟೇಟ್ ಮತ್ತು ಸಹೋದರರ ಹೆಸರಲ್ಲಿ ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದರು ಎಂಬ ವಿಚಾರವನ್ನು ಸಿಬಿಐ ದೆಹಲಿ ಇಡಿ ಅಧಿಕಾರಿಗಳಿಗೆ ನೀಡಿತ್ತು. ಇದರಂತೆ ಜಮೀರ್ ಮನೆ ಹಾಗೂ ಕಚೇರಿಗಳ ಮೇಲೆ ಐದು ಕಡೆಗಳಲ್ಲಿ ದಾಳಿ ನಡೆಸಿ ಮಹತ್ವದ ಕಡತಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಬಂಬೂಬಜಾರ್ ಬಳಿಯಿರುವ ಭವ್ಯ ಬಂಗಲೆ ನಿರ್ಮಿಸಲು ಏಳು ವರ್ಷವಾಯಿತು ಎಂದು ಅಧಿಕಾರಿಗಳ ಮುಂದೆ ಜಮೀರ್ ಮಾಹಿತಿ ನೀಡಿದ್ದರು. ಇಂದು ಬೆಳಗ್ಗೆ ಸಹ ಮಾಧ್ಯಮಗಳ ಮುಂದೆ ಮಾಹಿತಿ ಹಂಚಿಕೊಂಡಿದ್ದರು. ಅರಮನೆಯಂತಹ ಮನೆ ನಿರ್ಮಾಣಕ್ಕೆ ಖರ್ಚಾದ ಹಣವೆಷ್ಟು? ಎಂಬುದರ ಬಗ್ಗೆ ಇಡಿ ತನಿಖೆ ನಡೆಸಲಿದೆ. ನೂರಾರು ಕೋಟಿ ರೂ.ಬಂಗಲೆಗೆ ಹಣದ ಮೂಲ ಏನು? ಈ ಎಳೆ ಹಿಡಿದು ಹೊರಟಿರುವ ಅಧಿಕಾರಿಗಳು ಜಮೀರ್ ಸಂಪೂರ್ಣ ವ್ಯವಹಾರದ ಬಗ್ಗೆ ತನಿಖೆ ನಡೆಸುತ್ತಿದೆ.
ಜಮೀರ್ ಆದಾಯದ ಮೂಲ? ಮನೆ ನಿರ್ಮಾಣಕ್ಕೆ ಹಾಕಿರುವ ಬಂಡವಾಳದ ಮೂಲ ಏನು? ಟ್ರಾವೆಲ್ ವ್ಯವಹಾರ ಮತ್ತು ರಿಯಲ್ ಎಸ್ಟೇಟ್ನಲ್ಲಿ ಬಂದಿರುವ ಲಾಭ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದೆ. ಜಮೀರ್ ನೀಡಿರುವ ಹೇಳಿಕೆಗಳಿಗೂ ತೋರಿಸಲಾಗಿರುವ ದಾಖಲಾತಿಗಳಿಗೆ ಸಾಮ್ಯತೆ ಇದೆಯಾ ಎಂಬುದರ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.