ಬೆಂಗಳೂರು : ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದು ಬಿಜೆಪಿ ಹೇಳಿಕೊಂಡಿದ್ದರೆ, ತಾವು ಕಳೆದುಕೊಂಡದ್ದಕ್ಕಿಂತ ಗಳಿಸಿದ್ದೇ ಜಾಸ್ತಿ ಎಂದು ಕಾಂಗ್ರೆಸ್ ಹೇಳಿದೆ.
ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸೋಂ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶವೇ ಬಂದಿದೆ. ಕೇರಳ, ಪಶ್ಚಿಮ ಬಂಗಾಳ, ಅಸ್ಸೋಂನಲ್ಲಿ ಹಿಂದಿದ್ದ ಸರ್ಕಾರವೇ ಅಧಿಕಾರಕ್ಕೆ ಬಂದರೆ, ಆಡಳಿತ ವಿರೋಧಿ ಅಲೆಗೆ ತಮಿಳುನಾಡು, ಪುದುಚೆರಿಯಲ್ಲಿ ಸರ್ಕಾರ ಬದಲಾಗಿದೆ.
ಎಲ್ಲಿಯೂ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿಲ್ಲ. ಆದರೆ, ತಮಿಳುನಾಡಿನಲ್ಲಿ ಡಿಎಂಕೆ ಜತೆ ಒಪ್ಪಂದ ಮಾಡಿಕೊಂಡು ಕೊಂಚ ಬಲ ಹೆಚ್ಚಿಸಿಕೊಂಡಿದೆ. ಕೇರಳದಲ್ಲಿ 20 ಸ್ಥಾನ ಸಂಪಾದಿಸಿದೆ. ಇದನ್ನು ಬಿಟ್ಟರೆ ಉತ್ತರದ ರಾಜ್ಯಗಳಲ್ಲಿ ಕಾಂಗ್ರೆಸ್ ಸಾಧನೆ ಗಣನೀಯವಾಗಿ ಕಡಿಮೆ ಆಗಿದೆ.
ದಿನದಿಂದ ದಿನಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ ತನ್ನ ಜನಪ್ರಿಯತೆ ಉಳಿಸಿಕೊಳ್ಳುತ್ತಿಲ್ಲ. ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಹೀನಾಯ ಪ್ರದರ್ಶನ ನೀಡುವ ಮೂಲಕ ಹಲವು ರಾಜ್ಯಗಳಲ್ಲಿ ಅಸ್ಥಿತ್ವ ಕಳೆದುಕೊಳ್ಳುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿರುವ ಸಂದರ್ಭದಲ್ಲಿ ನಡೆದ ಈ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆದ ಏಳು-ಬೀಳುಗಳ ಮೇಲೆ ಒಂದು ನೋಟ ಇಲ್ಲಿದೆ.
ಕೇರಳ :ದೇವರನಾಡು ಎಂದೇ ಜನಪ್ರಿಯವಾಗಿರುವ ಕೇರಳದಲ್ಲಿ ಆಡಳಿತ ಪಕ್ಷ ಎಲ್ಡಿಎಫ್ಗೆ ಬೆಂಬಲ ಸೂಚಿಸಿದ್ದ ಕಾಂಗ್ರೆಸ್ 21 ಸ್ಥಾನ ಗೆದ್ದಿದೆ. ಅಂದಹಾಗೆ ಇದನ್ನು ಸಾಧನೆ ಎಂದು ಹೇಳಲಾಗದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 22 ಸ್ಥಾನ ಗೆದ್ದಿತ್ತು. ಒಂದು ಸ್ಥಾನದ ಕೊರತೆಯೇ ಆಗಿದೆ. ಇಲ್ಲಿ ಬಿಜೆಪಿ ಖಾತೆ ತೆರೆದೇ ಇಲ್ಲ ಎನ್ನುವ ಸಮಾಧಾನದಲ್ಲಿ ಕಾಂಗ್ರೆಸ್ ತನಗಾದ ಅಲ್ಪ ಹಿನ್ನಡೆ ಮರೆತಿದೆ. ಆದರೆ, ಇದೂ ಪಕ್ಷದ ಪ್ರಗತಿ ದೃಷ್ಟಿಯಿಂದ ಮಾರಕ.
ತಮಿಳುನಾಡು :ಪಕ್ಕದ ತಮಿಳುನಾಡು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಡಿಎಂಕೆ ಜತೆ ಲೋಕಸಭೆ ಮಾದರಿ ಹೊಂದಾಣಿಕೆ ಮಾಡಿಕೊಂಡಿದ್ದ ಕಾಂಗ್ರೆಸ್ಗೆ ದೊಡ್ಡ ಲಾಭವೇ ಸಿಕ್ಕಿದೆ. ಒಂದೆಡೆ ಬಿಜೆಪಿಗೆ ಹೋಲಿಸಿದರೆ ಇವರ ಸಾಧನೆ ದೊಡ್ಡದು. ಬಿಜೆಪಿ ನಾಲ್ಕು ಸ್ಥಾನ ಗೆದ್ದಿದ್ದು, ಕಳೆದ ಸಾರಿ ಕೇವಲ ಒಂದು ಸ್ಥಾನ ಪಡೆದಿತ್ತು.