ಕರ್ನಾಟಕ

karnataka

ETV Bharat / state

ಆಯುಷ್ಮಾನ್ ಕಾರ್ಡ್ ಉಪಯೋಗಗಳು ಹಾಗೂ ಯೋಜನೆಯ ಸೌಲಭ್ಯ ಪಡೆಯುವುದು ಹೇಗೆ? - etv bharat kannada

ರಾಜ್ಯದಲ್ಲಿ ಅನುಷ್ಠಾನಗೊಂಡಿರುವ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆ - ಒಂದು ವರ್ಷಕ್ಕೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ - ಆಯುಷ್ಮಾನ್ ಕಾರ್ಡ್ ಮಾಡಿಸುವುದು ಹೇಗೆಂದು ತಿಳಿಯಿರಿ

complete information of Ayushman Card
ಆಯುಷ್ಮಾನ್ ಕಾರ್ಡ್ ಉಪಯೋಗಗಳು ಹಾಗೂ ಯೋಜನೆಯ ಸೌಲಭ್ಯ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

By

Published : Feb 18, 2023, 8:40 PM IST

ಬೆಂಗಳೂರು: ಬಡವರಿಗೂ ವೈದ್ಯಕೀಯ ನೆರವು ಸಿಗಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆ ರೂಪಿಸಿ ಜಾರಿಗೊಳಿಸಿರುವುದು ತಿಳಿದಿರುವ ಸಂಗತಿಯೇ. ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಎಂಬ ಯೋಜನೆಯನ್ನು ರಾಜ್ಯದಲ್ಲೂ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆ ಕುರಿತು ಗ್ರಾಮೀಣ ಪ್ರದೇಶದ ಬಹುತೇಕ ಮಂದಿಗೆ ಸರಿಯಾದ ಮಾಹಿತಿಯೇ ಇರುವುದಿಲ್ಲ. ರಾಜ್ಯದ ಬಹುತೇಕ ಮಂದಿಗೆ ಆಯುಷ್ಮಾನ್ ಕಾರ್ಡ್ ಮಾಡಿಸುವುದೇಗೆ?, ಅದರಿಂದಾಗುವ ಉಪಯೋಗಗಳೇನು? ಎಂಬುದೇ ಗೊತ್ತಿರುವುದಿಲ್ಲ. ಆಯುಷ್ಮಾನ್ ಕಾರ್ಡ್​ನಿಂದ ಯಾವೆಲ್ಲಾ ಉಪಯೋಗಗಳಿವೆ ಎಂಬುದನ್ನು ತಿಳಿದುಕೊಳ್ಳಬಹುದು.

ಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವವರು ಹಾಗೂ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯಲ್ಲಿ ನೋಂದಾಯಿತವಾಗಿರುವ ಫಲಾನುಭವಿಗಳಿಗೆ ಒಂದು ವರ್ಷಕ್ಕೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಲಭ್ಯವಿದೆ. ಇನ್ನು ಎಪಿಎಲ್ ಕಾರ್ಡ್ ದಾರರು ಅಥವಾ ಬಿಪಿಎಲ್ ಕಾರ್ಡ್ ಹೊಂದಿಲ್ಲದವರಿಗೂ ಸಹ ಪಾವತಿ ಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್ ದರದ ಶೇ.30 ರಷ್ಟು ಚಿಕತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ 1.50 ಲಕ್ಷ ರೂ. ಇರುತ್ತದೆ. ರೋಗಿಗಳು ಚಿಕಿತ್ಸೆ ಪಡೆಯಲು ತಮ್ಮ ರೇಷನ್ ಕಾರ್ಡ್​ ಮತ್ತು ಆಧಾರ್ ಕಾರ್ಡ್ ಅನ್ನು ಹಾಜರುಪಡಿಸಬೇಕು.

ಯೋಜನೆಯ ಸೌಲಭ್ಯ ಪಡೆಯುವುದೇಗೆ?: ಪ್ರಾಥಮಿಕ, ದ್ವಿತೀಯ ಕ್ಲಿಷ್ಟಕರ ಚಿಕಿತ್ಸೆಗಳು ಮತ್ತು ತೃತೀಯ ಹಂತದ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದ್ದರೆ ಮಾತ್ರ ಅಲ್ಲಿಯೇ ನೀಡಲಾಗುತ್ತದೆ. ಇಲ್ಲದಿದ್ದರೆ ರೆಫರಲ್ ನೀಡಲಾಗುತ್ತದೆ. ರೆಫರಲ್ ಪಡೆದುಕೊಂಡ ರೋಗಿ ತಾನು ಇಚ್ಛಿಸುವ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಹೃದಯರೋಗ, ಕ್ಯಾನ್ಸರ್, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಕಾಯಿಲೆ ಸೇರಿದಂತೆ ತೃತೀಯ ಹಂತದ ಸುಮಾರು 900 ಚಿಕಿತ್ಸೆಗಳು ಹಾಗೂ ರಸ್ತೆ ಅಪಘಾತ ಸೇರಿದಂತೆ 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು.

'ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ-ಆರೋಗ್ಯ ಕರ್ನಾಟಕದಡಿ ಕೋ ಬ್ರಾಂಡೆಡ್ ಉಚಿತ ಪಿವಿಸಿ ಗುರುತಿನ ಚೀಟಿಗಳನ್ನು ತ್ವರಿತವಾಗಿ ವಿತರಿಸುತ್ತಿದ್ದು, 1.22 ಕೋಟಿ ಫಲಾನುಭವಿಗಳು ನೋಂದಣಿಯಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿಯವರ ಜನ ಆರೋಗ್ಯ ಯೋಜನೆಯ ಪ್ರಯೋಜನ ಪಡೆಯಲು ಎಲ್ಲರಿಗೂ ಅವಕಾಶ ಕಲ್ಪಿಸಲಾಗಿದೆ.

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ಎಬಿ-ಎಆರ್ಕೆ ಕಾರ್ಡ್​ನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ 10 ರೂ. ಶುಲ್ಕದೊಂದಿಗೆ ನೀಡಲಾಗುತ್ತದೆ. ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಸೇವಾ ಸಿಂಧು ಕೇಂದ್ರಗಳಲ್ಲಿ 35 ರೂ. ಶುಲ್ಕದೊಂದಿಗೆ ಎಬಿ-ಎಆರ್ಕೆ ಕಾರ್ಡ್ ನೀಡಲಾಗುತ್ತದೆ. ಆಧಾರ್ ಕಾರ್ಡ್ ಮತ್ತು ಪಡಿತರ ಕಾರ್ಡ್ ಗಳನ್ನು ಹಾಜರುಪಡಿಸಿ ಆರೋಗ್ಯ ಕಾರ್ಡ್ ಪಡೆಯಬಹುದು.
ಸೌಲಭ್ಯ ಮತ್ತು ಮಾಹಿತಿಗಾಗಿ, ಹತ್ತಿರದ ಸರ್ಕಾರಿ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು, ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳನ್ನು ಸಂಪರ್ಕಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಯಶಸ್ವಿನಿ ಯೋಜನೆ ಖಾಸಗಿ ಸಂಸ್ಥೆ ನೌಕರರರಿಗೂ ವಿಸ್ತರಣೆ: ರಾಜ್ಯ ಸರ್ಕಾರ ಸೂಚನೆ

ABOUT THE AUTHOR

...view details