ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮತ್ತು ಶೇ. 40ರಷ್ಟು ಕಮೀಷನ್ ಆರೋಪದ ಹಿನ್ನೆಲೆ ಕೊನೆಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜೀನಾಮೆ ಸಲ್ಲಿಸಲು ಈಶ್ವರಪ್ಪ ತೀರ್ಮಾನಿಸಿದ್ದಾರೆ.
ಕಾಂಗ್ರೆಸ್ ನಾಯಕರು ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿ, ವಿಧಾನಸೌಧದ ಪೂರ್ವದ್ವಾರದಲ್ಲಿ ಅಹೋರಾತ್ರಿ ಧರಣಿ ಆರಂಭಿಸುತ್ತಿದ್ದಂತೆ ಶಿವಮೊಗ್ಗದಲ್ಲಿ ನಿನ್ನೆ ಸುದ್ದಿಗೋಷ್ಠಿ ಕರೆದ ಈಶ್ವರಪ್ಪ ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಹೇಳಿದ್ದರು.
ಈಶ್ವರಪ್ಪ ಅವರ ರಾಜೀನಾಮೆ ಪಡೆಯದಿದ್ದರೆ ಪ್ರಕರಣ ಬೇರೆ ಸ್ವರೂಪ ಪಡೆಯಬಹುದು. ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಮುಜುಗರವಾಗಬಹುದು ಎನ್ನುವ ಕಾರಣಕ್ಕೆ ಹೈಕಮಾಂಡ್ ರಾಜೀನಾಮೆ ಪಡೆಯುವಂತೆ ಆದೇಶಿಸಿತ್ತು ಎನ್ನಲಾಗಿದೆ.
ಆರೋಪವೇನು? : ಬೆಳಗಾವಿ ಮೂಲದ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಅವರ ಮೇಲೆ ಗಂಭೀರ ಆರೋಪ ಮಾಡಿದ್ದರು. ಸಚಿವ ಈಶ್ವರಪ್ಪ ಅವರು ಶೇ. 40ರಷ್ಟು ಕಮೀಷನ್ ಕೇಳುತ್ತಿದ್ದಾರೆ ಎಂದು ದೂರಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು.
ಮೂರು ದಿನಗಳ ಹಿಂದೆಯಷ್ಟೇ ಗುತ್ತಿಗೆದಾರ ಸಂತೋಷ ಪಾಟೀಲ್ ಉಡುಪಿಯ ಲಾಡ್ಜ್ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ ಸಂತೋಷ ವಾಟ್ಸಾಪ್ ಮೂಲಕ ಡೆತ್‍ನೋಟ್ ಕಳಿಸಿದ್ದಾರೆ ಎನ್ನಲಾಗುತ್ತಿದ್ದು, ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ನಡೆದಿದ್ದೇನು?: ಪ್ರವಾಹದಿಂದ ಹಾಳಾಗಿದ್ದ ಹಿಂಡಲಗಾ ಗ್ರಾಮದಲ್ಲಿ ರಸ್ತೆ, ಚರಂಡಿ ಹಾಗೂ ಇತರ ಮೂಲಸೌಕರ್ಯದ ಕಾಮಗಾರಿ ನಡೆಸುವ ಅನಿವಾರ್ಯವಿತ್ತು. ಹೀಗಾಗಿ, ಹಿಂಡಲಗಾದಲ್ಲಿ ಸಂತೋಷ್ ಹಾಗೂ ಇತರರು ಸೇರಿ 4 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ನಡೆಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಇದರಲ್ಲಿ ಸಂತೋಷ್ ಗುತ್ತಿಗೆದಾರರಾದರೆ, ಉಳಿದ ಸ್ನೇಹಿತರು ಕಾಮಗಾರಿ ನಡೆಸಲು ಬಂಡವಾಳ ಹೂಡಿಕೆ ಮಾಡಿದ್ದಾರೆ. ಅಷ್ಟೇ ಅಲ್ಲ, ಇದರಲ್ಲಿ ಹಿಂಡಲಗಾ ಗ್ರಾಮ ಪಂಚಾಯತ್ ಅಧ್ಯಕ್ಷರು ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.
ಸರ್ಕಾರದಿಂದ ಕಾರ್ಯಾದೇಶ ಪಡೆದಿಲ್ಲ:ಈ ಕಾಮಗಾರಿ ಕೈಗೊಳ್ಳುವ ಮುನ್ನ ಇವರಾರೂ ಸರ್ಕಾರದಿಂದ ಯಾವುದೇ ಮಂಜೂರು, ಕಾರ್ಯಾದೇಶ ಪಡೆದಿಲ್ಲ. ಪಂಚಾಯತ್ ಅಧ್ಯಕ್ಷರು ಹಾಗೂ ಸಂತೋಷ್ ಅವರು ಬಿಜೆಪಿ ಬೆಂಬಲಿತರಾಗಿದ್ದ ಹಿನ್ನೆಲೆ ತಮ್ಮದೇ ಸರ್ಕಾರ ಎನ್ನುವ ವಿಶ್ವಾಸದಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ ಎಂದು ಹೇಳಲಾಗಿದೆ.
ಆದರೆ, ವರ್ಷವೇ ಕಳೆದರೂ ಕಾರ್ಯಾದೇಶವಾಗದ ಕಾರಣ ಕಾಮಗಾರಿ ಬಿಲ್ ಪಾವತಿಯಾಗಿಲ್ಲ. ಕಳೆದ ಫೆಬ್ರವರಿಯಲ್ಲಿ ಹಿಂಡಲಗಾ ಪಂಚಾಯತ್ ಅಧ್ಯಕ್ಷರು ಆರ್ಡಿಪಿಆರ್ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಕಾರ್ಯಾದೇಶ ಕೊಡಿಸಬೇಕು.
ಜೊತೆಗೆ ಕಾಮಗಾರಿಯ ಬಿಲ್ ಕೂಡ ಪಾತಿಸಿಕೊಡಬೇಕೆಂದು ಕೇಳಿದ್ದಾರೆ. ಇದಕ್ಕೆ ಸುದೀರ್ಘ ಉತ್ತರ ನೀಡಿರುವ ಆರ್ಡಿಪಿಆರ್ ಇಲಾಖೆ ಅಧಿಕಾರಿಗಳು, ಕಾರ್ಯಾದೇಶ ಇಲ್ಲದೆ 4 ಕೋಟಿ ರೂ. ಕಾಮಗಾರಿ ನಡೆಸಿದ್ದಾದರೂ ಹೇಗೆ ಎನ್ನುವ ಬಗ್ಗೆ ತನಿಖಾ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ, ಇದುವರೆಗೆ ತನಿಖಾ ವರದಿಯೇ ಬಂದಿಲ್ಲ ಎಂದು ಅಧಿಕಾರಿಗಳು ಉತ್ತರಿಸಿದ್ದಾರೆ.
ಹಿಂಡಲಗಾದಲ್ಲಿ ಕಾಮಗಾರಿ :ಕಳೆದ ಬಾರಿ ಸೃಷ್ಟಿಯಾಗಿದ್ದ ಪ್ರವಾಹದಿಂದಾಗಿ ಬೆಳಗಾವಿ ಜಿಲ್ಲೆಯ ಹಿಂಡಲಗಾ ಗ್ರಾಮದ ರಸ್ತೆಗಳೆಲ್ಲ ಹಾಳಾಗಿದ್ದವು. ಈ ರಸ್ತೆಗಳ ಅಭಿವೃದ್ಧಿಗೆ ತುಂಡು ಗುತ್ತಿಗೆಯನ್ನು ಪಡೆದು ಕಾಮಗಾರಿ ನಡೆಸಿದೆವು. 2021ರ ಫೆಬ್ರವರಿ 4ರ ವೇಳೆಗೆ ಎಲ್ಲ ರಸ್ತೆಯ ಕಾಮಗಾರಿಗಳನ್ನು ಪೂರ್ಣಗೊಳಿಸಿದೆವು.
ಅದರ ಖರ್ಚು 4 ಕೋಟಿ ರೂ. ಆಗಿತ್ತು. ಕಾಮಗಾರಿ ಪೂರ್ಣಗೊಂಡು ಒಂದು ವರ್ಷ ಕಳೆದರೂ ಸರ್ಕಾರದಿಂದ ಹಣ ಬಿಡುಗಡೆ ಆಗಿರಲಿಲ್ಲ ಎಂದು ತಮ್ಮ ಕಾಮಗಾರಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿಳಂಬದ ಬಗ್ಗೆ ಸಂತೋಷ್ ಪಾಟೀಲ್ ಆರೋಪಿಸಿದ್ದರು.
ಅಂದು ಅವರು ಹೇಳಿಕೆ ನಿಡಿದ್ದ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ:ಕಮೀಷನ್ ಆರೋಪದಿಂದ ನುಣುಚಿಕೊಳ್ಳಲು ಈಶ್ವರಪ್ಪ ಏನೇನೋ ಹೇಳಿಕೆ ನೀಡುತ್ತಿದ್ದಾರೆ : ಗುತ್ತಿಗೆದಾರ ಸಂತೋಷ್
ಸಂತೋಷ್ ಗಂಭೀರ ಆರೋಪ ಮಾಡುತ್ತಿದ್ದಂತೆ ಸಚಿವ ಕೆ.ಎಸ್. ಈಶ್ವರಪ್ಪ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ರಾಜ್ಯದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯು ಸಂತೋಷ್ ಪಾಟೀಲ್ ಉಲ್ಲೇಖಿಸಿ ಕಾಮಗಾರಿಗೆ ಅನುಮೋದನೆಯನ್ನು ಕೋರಿಲ್ಲ.
ಸರ್ಕಾರವು ಯಾವುದೇ ಕಾಮಗಾರಿಯನ್ನು ಮಂಜೂರು ಮಾಡಿಲ್ಲ. ಈ ಕಾಮಗಾರಿ ಸಂಬಂಧ ಇಲಾಖೆಯು ಯಾವುದೇ ಕಾರ್ಯಾದೇಶವನ್ನು ನೀಡಿಲ್ಲ, ಆಡಳಿತಾತ್ಮಕ ಅನುಮೋದನೆಯನ್ನೂ ಸಹ ನೀಡಿಲ್ಲ ಎಂದು ಅಪರ ಮುಖ್ಯ ಕಾರ್ಯದರ್ಶಿಯವರು ಕೇಂದ್ರದ ಸಚಿವರಿಗೆ ಈ ಕುರಿತು ಸ್ಪಷ್ಟೀಕರಣವನ್ನು ನೀಡಿ ಪತ್ರವನ್ನು ಬರೆದಿದ್ದಾರೆ ಎಂದು ಹೇಳಿದ್ದಾರೆ.
ಕಾಮಗಾರಿ ಅನುಮೋದನೆ ಆಗಿಲ್ಲ, ಕೆಲಸಕ್ಕೆ ಆದೇಶವನ್ನು ನೀಡಿಲ್ಲ. ಇದರ ಮಧ್ಯೆ ನಮಗೆ 4 ಕೋಟಿ ರೂಪಾಯಿ ಹಣ ನೀಡಬೇಕು ಎಂದು ಯಾವ ಲೆಕ್ಕದಲ್ಲಿ ಕೇಳುತ್ತಿದ್ದಾರೆ. ಕೆಲಸವೇ ಆಗಿಲ್ಲ ಎಂದ ಮೇಲೆ ಕಮೀಷನ್ ಹೇಗೆ ಕೇಳುತ್ತಾರೆ ಎಂಬುದನ್ನು ಅವರೇ ಹೇಳಬೇಕು.
ಶೇ.40ರಷ್ಟು ಕಮೀಷನ್ ಕೇಳುತ್ತಿದ್ದಾರೆ ಎಂಬ ಆರೋಪ ಮಾಡಿದ ನಂತರ ಸಂತೋಷ್ ವಿರುದ್ಧ ಮಾರ್ಚ್ 10 ರಂದು ಮಾನನಷ್ಟ ಮೊಕದ್ದಮೆಯನ್ನು ಹಾಕಲಾಗಿದೆ ಎಂದು ಸಚಿವರು ಹೇಳಿಕೆ ನೀಡಿದ್ದರು. ಇಷ್ಟರೊಳಗೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಘಟನೆ ನಡೆದು ಹೋಗಿದೆ. ಸಂತೋಷ್ ಆತ್ಮಹತ್ಯೆಗೆ ನಿಖರ ಕಾರಣವೇನು? ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.