ಬೆಂಗಳೂರು : ಕರ್ನಾಟಕ ಸೇರಿದಂತೆ ಬಹುತೇಕ ಎಲ್ಲ ರಾಜ್ಯಗಳಲ್ಲಿ ಮುಂದಿನ ಹತ್ತು ವರ್ಷದಲ್ಲಿ ಡಿಸೇಲ್ - ಪೆಟ್ರೋಲ್ ಇಂಜಿನ್ ಸಂಪೂರ್ಣ ನಿಷೇಧವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ. ಬೆಂಗಳೂರು ಪ್ರೆಸ್ ಕ್ಲಬ್ ದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು.
ಈಗಾಗಲೇ ಬಹುತೇಕ ಕಡೆ ಡಿಸೇಲ್ ಇಂಜಿನ್‌ಗಳು ಬಹುಶಃ ಬಂದ್ ಆಗಿವೆ. ಡಿಸೇಲ್, ಪೆಟ್ರೋಲ್ ಬದಲಾಗಿ ಎಥೆನಾಲ್ ಬಳಕೆ ಇಂಜಿನ್‌ಗಳು ಕಾರ್ಯರೂಪಕ್ಕೆ ಬರಲಿವೆ. ಪ್ರಸ್ತುತ ಶೇ. 20 ರಷ್ಟು ಎಥೆನಾಲ್ ಬಳಕೆ ಆಗುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಅದರ ಬಳಕೆ ಪ್ರಮಾಣ ದ್ವಿಗುಣಗೊಳ್ಳಲಿದೆ ಎಂದು ಸಚಿವ ನಿರಾಣಿ ಹೇಳಿದ್ದಾರೆ.
ಇತ್ತೀಚಿನ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 9.81 ಲಕ್ಷ ಕೋಟಿ ಬಂಡವಾಳ ಹರಿದು ಬಂದಿದೆ. ಕೈಗಾರಿಕೆಗಳನ್ನು ಆರಂಭಿಸಲು ಶೇ. 50 ರಷ್ಟು ಸಬ್ಸಿಡಿ ಸಿಗುತ್ತದೆ. ಬ್ಯಾಂಕ್‌ಗಳು ಸಾಲ ನೀಡುತ್ತವೆ ಎಂದು ತಿಳಿಸಿದರು.
ಭೂಮಿ ಹಂಚಿಕೆ ಸರಳ:‘ಈಸ್ ಆಫ್ ಡುಯಿಂಗ್ ಬಿಸಿನೆಸ್’ ಮಾದರಿ 1 ಈಸ್ ಆಫ್ ಲ್ಯಾಂಡ್ ಅಲಾಟ್‌ಮೆಂಟ್ ಪದ್ದತಿಯನ್ನು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ ಜಾರಿಗೊಳಿಸಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುವ ಉದ್ದಿಮೆಗಳಿಗೆ ಅಗತ್ಯ ಇರುವ ಭೂಮಿಯನ್ನು ಸುಲಭವಾಗಿ ನೀಡುವುದು ಇದರ ಉದ್ದೇಶವಾಗಿದೆ ಎಂದು ಸಚಿವರು ವಿವರಿಸಿದರು.
ಸಚಿವ ಮುರುಗೇಶ್ ನಿರಾಣಿ ಅಭಿಮತ ಭೂಮಿಗೆ ಅನುಮತಿ ಶೀಘ್ರ:10 ಎಕರೆಗಿಂತ ಕಡಿಮೆ ವಿಸ್ತೀರ್ಣದ ಭೂಮಿಗೆ ಜಿಲ್ಲಾ ಅಥವಾ ರಾಜ್ಯ ಮಟ್ಟದ ಅನುಮೋದನಾ ಸಮಿತಿಯಲ್ಲಿ ಪ್ರಸ್ತಾವನೆಗಳಿಗೆ ತ್ವರಿತ ಅನುಮೋದನೆ ದೊರೆಯುತ್ತದೆ. ಇದರಿಂದ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದ್ದಾರೆ.
50 ಸಾವಿರ ಎಕರೆ ಸ್ವಾಧೀನ:ರಾಜ್ಯದಲ್ಲಿ ಕೈಗಾರಿಕೆ ಸ್ಥಾಪಿಸಲು ಮುಂದೆ ಬರುವ ಉದ್ಯಮಿಗಳಿಗೆ ತಕ್ಷಣ ಭೂ ಮಂಜೂರು ಮಾಡಲು ಅನುಕೂಲವಾಗುವಂತೆ ರಾಜ್ಯಾದ್ಯಂತ 50 ಸಾವಿರ ಎಕರೆ ಜಮೀನನ್ನು ಭೂ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದರು.
ಕೃಷಿ ಭೂಮಿ ಸ್ವಾಧೀನ ಇಲ್ಲ:ಯಾವುದೇ ಒಬ್ಬ ರೈತರಿಂದಲೂ ಕೈಗಾರಿಕಾ ಉದ್ದೇಶಗಳಿಗೆ ಬಲವಂತವಾಗಿ ಜಮೀನು ಸ್ವಾಧೀನ ಮಾಡಿಕೊಳ್ಳುತ್ತಿಲ್ಲ. ಯಾವ ರೈತರು ಸ್ವಯಂ ಪ್ರೇರಿತ ಜಮೀನು ಕೊಡಲು ಮುಂದೆ ಬರುತ್ತಾರೋ ಅಂಥವರ ಜಮೀನು ಸ್ವಾಧೀನಪಡಿಸಿಕೊಳ್ಳುತ್ತಿದ್ದೇವೆ ಎಂದು ಸಚಿವ ನಿರಾಣಿ ಇದೇ ವೇಳೆ ಸ್ಪಷ್ಟಪಡಿಸಿದರು.
ಒಂದು ಜಿಲ್ಲೆ ಒಂದು ಉತ್ಪನ್ನ ನೀತಿ: ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಯೋಜನೆಯಡಿ ರಾಜ್ಯದ 2 ಮತ್ತು 3ನೇ ಹಂತದ ನಗರಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಉತ್ತೇಜಿಸಲಾಗುತ್ತಿದೆ. ಶೀಘ್ರದಲ್ಲಿ ರಾಜ್ಯ ಸರ್ಕಾರವು ಒಂದು ಜಿಲ್ಲೆ ಒಂದು ಉತ್ಪನ್ನ ನೀತಿ ಜಾರಿಗೆ ತರಲಿದೆ. ಈ ಉತ್ಪನ್ನದಲ್ಲಿ ತೊಡಗಿಸಿಕೊಂಡಿರುವ ಉದ್ಯಮಿಗಳು ಯೋಜನಾ ವೆಚ್ಚದ 35 ಪ್ರತಿಶತದಷ್ಟು ಕ್ರೆಡಿಟ್ – ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿಯನ್ನು ಪ್ರತಿ ಯೂನಿಟ್‌ಗೆ ಗರಿಷ್ಠ 10 ಲಕ್ಷ ರೂ. ಪಡೆಯಬಹುದು ಎಂದು ಸಲಹೆ ನೀಡಿದರು.
ಸಮತೋಲಿತ ಕೈಗಾರಿಕೀಕರಣ: ರಾಜ್ಯಾದ್ಯಂತ ಸಮತೋಲಿತ ಕೈಗಾರಿಕೀಕರಣ ಉತ್ತೇಜಿಸಲು ತೆಗೆದುಕೊಂಡ ಪ್ರಮುಖ ನಿರ್ಧಾರ ಎಂದರೆ ಉತ್ಪನ್ನ ನಿರ್ದಿಷ್ಟ ಕೈಗಾರಿಕಾ ಕ್ಲಸ್ಟರ್. ಪ್ರತಿ ಕ್ಲಸ್ಟರ್‌ಗೆ ಆಯಾ ಉತ್ಪನ್ನ ವಲಯಕ್ಕೆ ನಿರ್ದಿಷ್ಟವಾದ ವಿಶೇಷ ಪ್ರೊತ್ಸಾಹ ಮತ್ತು ರಿಯಾಯಿತಿಗಳನ್ನು ಘೋಷಿಸಲಾಗಿದೆ ಎಂದು ಹೇಳಿದರು.
ಬಂಡವಾಳ ಹೂಡಿಕೆ:ಕರ್ನಾಟಕ ಉದ್ಯೋಗ ಮಿತ್ರದಲ್ಲಿ ನಡೆದ 130ನೇ ರಾಜ್ಯಮಟ್ಟದ ಬಂದು ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ 50 ಯೋಜನೆಗಳಿಂದ 20,627.88 ಕೋಟಿ ಬಂಡವಾಳ ಹೂಡಿಕೆಯಾಗಿದೆ. ಇದರಿಂದ 80,764 ಜನರಿಗೆ ಉದ್ಯೋಗಾವಕಾಶ ಲಭಿಸಲಿವೆ ಎಂದು ತಿಳಿಸಿದರು.
ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿರುವ ಒಪ್ಪಂದಗಳು ಮುಂದಿನ 5 ವರ್ಷಗಳಲ್ಲಿ ಶೇ. 75 ರಷ್ಟು ಅನುಷ್ಠಾನಕ್ಕೆ ಬರಲಿವೆ. ಕೇವಲ ಬಂಡವಾಳ ಹೆಚ್ಚಿಸಿಕೊಳ್ಳಲು ಅಂಕಿ - ಸಂಖ್ಯೆಗಳನ್ನು ತೋರಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿಲ್ಲ. ಯೋಜನೆಗಳನ್ನು ರಾಜ್ಯದಲ್ಲಿ ಪ್ರಾರಂಭಿಸುವವರಿಗೆ ಮಾತ್ರ ಒಪ್ಪಿಗೆ ಕೊಟ್ಟಿದ್ದೇವೆ. 5 ವರ್ಷದೊಳಗೆ ಶೇ. 75ರಷ್ಟು ಎಂಒಯು ಅನುಷ್ಠಾನಕ್ಕೆ ಬರಲಿದೆ ಎಂದರು.
ಇದನ್ನೂ ಓದಿ :ಕುಡಿವ ನೀರಿನ ಬಾವಿಯಲ್ಲಿ ಡೀಸೆಲ್ ಪತ್ತೆ: ಆತಂಕಗೊಂಡ ಕುಟುಂಬಸ್ಥರು