ಕರ್ನಾಟಕ

karnataka

ETV Bharat / state

ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಬೆಂಗಳೂರು ಗಲಭೆ ನಡೆದಿದ್ದು ಹೇಗೆ? - ಬೆಂಗಳೂರು ಕೆಜಿ ಹಳ್ಳಿ ಗಲಭೆ

ಡಿ.ಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಠಾಣಾ ವ್ಯಾಪ್ತಿಗಳಲ್ಲಿ ಗಲಭೆ ಹೇಗೆ ಪ್ರಾರಂಭವಾಯಿತು. ಕೇವಲ ನಾಲ್ಕು ಗಂಟೆಯ ಅವಧಿಯಲ್ಲಿ ಅಷ್ಟೊಂದು ದೊಡ್ಡ ಮಟ್ಟದ ದುರ್ಘಟನೆ ಹೇಗೆ ನಡೆಯಿತು ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

compleat information about Bengaluru riot
ಬೆಂಗಳೂರು ಗಲಭೆಯ ಸಂಪೂರ್ಣ ಮಾಹಿತಿ

By

Published : Aug 14, 2020, 2:45 PM IST

ಬೆಂಗಳೂರು :ನಗರದ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಗಲಭೆ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಒಂದೇ ಒಂದು ಫೇಸ್​ಬುಕ್​ ಪೋಸ್ಟ್​​ನಿಂದ ಹೊತ್ತಿಕೊಂಡ ಬೆಂಕಿ ಆರಿ ಹೋಗುವುದರೊಳಗೆ ಪೊಲೀಸ್​ ವಾಹನ, ಠಾಣೆ , ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆ ಹಾಗೂ ಫೇಸ್​ಬುಕ್​ ಪೋಸ್ಟ್ ಹಾಕಿದ ನವೀನ್ ಎಂಬಾತನ ಮನೆಯನ್ನು ಸುಟ್ಟು ಕರಕಲು ಮಾಡಿತ್ತು.

ಹಾಗಾದರೆ, ಗಲಭೆ ಹೇಗೆ ಪ್ರಾರಂಭವಾಯಿತು. ಕೇವಲ ನಾಲ್ಕು ಗಂಟೆಯ ಅವಧಿಯಲ್ಲಿ ಅಷ್ಟೊಂದು ದೊಡ್ಡ ಮಟ್ಟದ ದುರ್ಘಟನೆ ಹೇಗೆ ನಡೆಯಿತು ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ರಾತ್ರಿ 9ಗಂಟೆಗೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್​ ಮೂರ್ತಿ ಮನೆ ಹಾಗೂ ಕಚೇರಿ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ್ದರು.

9:30-10ಗಂಟೆ ಸುಮಾರಿಗೆ ಡಿ.ಜೆ ಹಳ್ಳಿ ಪೊಲೀಸ್ ಠಾಣೆ ಹಾಗೂ ಕೆ.ಜಿ ಹಳ್ಳಿ ಪೊಲೀಸ್ ಠಾಣೆ ಬಳಿ ಜನ ಸೇರಿದ್ದರು.

10:30 ರ ಸುಮಾರಿಗೆ ಆಕ್ರೋಶಿತರ ಗುಂಪು ಟೈರ್​ಗೆ ಬೆಂಕಿ ಹಚ್ಚಿ ಪೊಲೀಸ್​ ಠಾಣೆಗೆ ನುಗ್ಗಲು ಯತ್ನಿಸಿತು.

10:40 ರಸುಮಾರಿಗೆ ಪರಿಸ್ಥಿತಿ ನಿಭಾಯಿಸುವ ದೃಷ್ಟಿಯಿಂದ ಕೆಎಸ್​ಆರ್​ಪಿ ತುಕಡಿ ಆಗಮಿಸಿತ್ತು.

11:30 ರ ಸುಮಾರಿಗೆ ಪರಿಸ್ಥಿತಿ ಹತೋಟಿಗೆ ಸಿಗದಿರುವ ಮುನ್ಸೂಚನೆ ಹಿನ್ನೆಲೆ, ಎರಡೂ ಠಾಣೆಯ ಗೇಟ್​ಗೆ ಬೀಗ ಹಾಕಿ ಹೊರ ಭಾಗದಲ್ಲಿ ಪೊಲೀಸ್ ಸಿಬ್ಬಂದಿ ನೆರೆದಿದ್ದರು. ಮಧ್ಯರಾತ್ರಿ 12 ಗಂಟೆಗೆ ಕಿಡಿಗೇಡಿಗಳು ಠಾಣೆ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಲು ಮುಂದಾಗಿದ್ದರು.

12:32 ರ ಸುಮಾರಿಗೆ ಪುಂಡರು ಪೊಲೀಸ್​ ವಾಹನಗಳಿಗೆ ಬೆಂಕಿ ಹಚ್ಚಲು ಶುರು ಮಾಡಿದ್ದರು, ಪರಿಸ್ಥಿತಿಯ ಗಂಭೀರತೆ ಅರಿತ ಕೆಎಸ್​ಆರ್​ಪಿ ಸಿಬ್ಬಂದಿ ಗುಂಡು ಹಾರಿಸಲು ಮುಂದಾದರು.

ಪರಿಸ್ಥಿತಿ ಹತೋಟಿಗೆ ಕೆಎಸ್​ಆರ್​ಪಿ ಸಿಬ್ಬಂದಿ ಹರಸಾಹಸಪಟ್ಟರೂ ಫಲ ನೀಡದ ಹಿನ್ನೆಲೆ ಮಧ್ಯರಾತ್ರಿ 1 ಗಂಟೆಗೆ ಹಿರಿಯ ಅಧಿಕಾರಿಗಳ ಮೊರೆ ಹೋಗಿದ್ದರು.

1:15 ರ ಸುಮಾರಿಗೆ ನೀವು ಅನುಮತಿ ನೀಡಿದರೆ ಗೋಲಿಬಾರ್ ನಡೆಸುತ್ತೇವೆ ಎಂದು ಹಿರಿಯ ಅಧಿಕಾರಿಗಳಲ್ಲಿ ಕಿರಿಯ ಅಧಿಕಾರಿಗಳು ಮನವಿ ಮಾಡಿದ್ದರು.

2:00 ಗಂಟೆಗೆ ಕಾವಲ್​ ಭೈರಸಂದ್ರ, ಡಿ.ಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಠಾಣೆಗೆ ಹಿರಿಯ ಅಧಿಕಾರಿಗಳು ಭೇಟಿ ಕೊಟ್ಟಿದ್ದರು.

2:15 ರ ಸುಮಾರಿಗೆ ಪೊಲೀಸರು ಗೋಲಿಬಾರ್ ಪ್ರಾರಂಭಿಸಿದರು. ಈ ವೇಳೆ ಮೂವರು ಯುವಕರು ಪೊಲೀಸರ ಗುಂಡಿಗೆ ಬಲಿಯಾದರು.

2:30 ರಸುಮಾರಿಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪಿ ನವೀನ್ ಬಂಧನದ ಬಗ್ಗೆ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದರು.

2: 45 ರಸುಮಾರಿಗೆ ಎರಡೂ ಠಾಣೆಗಳ ಬಳಿ ಪರಿಸ್ಥಿತಿ ಹತೋಟಿಗೆ ಬಂತು. ಪೊಲೀಸರು ಗಲಭೆ ಪ್ರಕರಣದ ಪ್ರಮುಖ ಆರೋಪಿ ಎಸ್​ಡಿಪಿಐ ಕಾರ್ಯದರ್ಶಿ ಮುಜಾಮಿಲ್ ಪಾಷಾನನ್ನು ಬಂಧಿಸಿದ್ದರು.

12 .8.2020 :ರಾತ್ರಿಯಿಂದ ಮುಂಜಾನೆ ವರೆಗೆ ‌ಪೊಲೀಸರು ಕಾರ್ಯಾಚರಣೆ ನಡೆಸಿದರು. ಮರುದಿನ 8 ಗಂಟೆ ಸುಮಾರಿಗೆ ಎಲ್ಲ 20 ಐಪಿಎಸ್ ಅಧಿಕಾರಿಗಳ ತಂಡದಿಂದ ಸಭೆ ನಡೆಸಲಾಯಿತು. ಬಳಿಕ ಪೊಲೀಸ್​ ಠಾಣೆಗೆ ಬೆಂಗಳೂರು ನಗರದ ಜಿಲ್ಲಾಧಿಕಾರಿ, ಕಾಂಗ್ರೆಸ್ ನಿಯೋಗ ಮತ್ತು ರಾಜಕೀಯ ಮುಖಂಡರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

13.8.2020 :ಘಟನೆ ಸಂಬಂಧ ಕಿಡಿಗೇಡಿಗಳು, ಪ್ರಕರಣದ ಪ್ರಮುಖ ಆರೋಪಿಗಳ ಮೇಲೆ ಎಫ್​ಐಆರ್ ದಾಖಲಿಸಿ, ತಲೆಮರೆಸಿಕೊಂಡ ಆರೋಪಿಗಳಿಗೆ ಖಾಕಿ ಶೋಧ ನಡೆಸಿತು. ಘಟನೆ ನಡೆದ ತನ್ನ ಮನೆಗೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಭೇಟಿ ನೀಡಿದರು. ಮಧ್ಯಾಹ್ನ ಹೊತ್ತಿಗೆ ಎಫ್ಎಸ್​ಎಲ್ ತಂಡ ಆಗಮಿಸಿ ಕುರುಹುಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಸಿತು.

14.8.2020 :ಸಿಸಿಬಿ ಪೊಲೀಸರು ಒಟ್ಟು 206 ಆರೋಪಿಗಳನ್ನು ಬಂಧಿಸಿದರು. ‌ಕೆ.ಜಿ ಹಳ್ಳಿ ಡಿ.ಜೆ ಹಳ್ಳಿ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಐಪಿಸಿ ಸೆಕ್ಷನ್ 307, 195, 120, 148, 149 ರ ಅಡಿ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಹತ್ತಕ್ಕೂ ಹೆಚ್ಚು ಎಫ್​ಐಆರ್​ ದಾಖಲಿಸಲಾಗಿದೆ.

ಒಂದೆಡೆ ಗೋಲಿಬಾರ್, ಕಲ್ಲು ತೂರಾಟ ನಡೆಯುತ್ತಿದ್ದರೆ, ಇನ್ನೊಂದೆಡೆ ಹಣ ಹಂಚಿಕೆ ಮಾಡುತ್ತಿದ್ದ ಸಿಸಿಟಿವಿ ದೃಶ್ಯ ಪೊಲೀಸರಿಗೆ ಲಭ್ಯವಾಗಿತ್ತು. ಠಾಣೆ ಮುಂಭಾಗ ಹೋಗಿ ಗಲಾಟೆ ಮಾಡುವಂತೆ ವ್ಯಕ್ತಿಯೊಬ್ಬ ಮೂವರು ಯುವಕರಿಗೆ ಸೂಚಿಸಿ ಅವರಿಗೆ ಹಣ ನೀಡುವ ದೃಶ್ಯ ಸ್ಪಷ್ಟವಾಗಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹಣ ಹಂಚಿದ ವ್ಯಕ್ತಿ ಮುಜಾಮಿಲ್ ಪಾಷಾ ಎಂಬ ಸಂಶಯವಿರುವ ಕಾರಣ, ಹಣ ಪಡೆದುಕೊಂಡಿರುವ ಯುವಕರು ಯಾರೂ ಮತ್ತು ಏನೆಲ್ಲಾ ಸಂಭಾಷಣೆ ನಡೆದಿತ್ತುಎಂಬುವುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಸದ್ಯ, ಗಲಭೆ ನಡೆದ ಪ್ರದೇಶಗಳಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದ್ದು, ನಗರದಲ್ಲಿ ನಾಳೆ ಬೆಳಗಿನವರೆಗೂ ನಿಷೇಧಾಜ್ಙೆ ಜಾರಿಗೊಳಿಸಲಾಗಿದೆ. ಅತೀ ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲು ಸಿಎಂ ಆದೇಶ ನೀಡಿರುವ ಹಿನ್ನೆಲೆ, ಡಿಜಿ & ಐಜಿಪಿ ಪ್ರವೀಣ್ ಸೂದ್ ಭದ್ರತೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ABOUT THE AUTHOR

...view details