ಸಿಎಂ ಸಿದ್ದರಾಮಯ್ಯ ಮುಂದೆ ವಿಚಿತ್ರ ಬೇಡಿಕೆ ಬೆಂಗಳೂರು : ಸಿಎಂ ಸಿದ್ದರಾಮಯ್ಯ ಜೊತೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯುತ್ತಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಕೆಲ ವಿಚಿತ್ರ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ. ಅಲ್ಲದೇ, ಸಾಕಷ್ಟು ಜನರು ತಮ್ಮ ಅಹವಾಲು ನೀಡುತ್ತಿದ್ದಾರೆ.
ಬೆಳಗಾವಿಯ ಅಥಣಿಯ ಅಶೋಕ್ ತಳವಾರ್ ಎಂಬವರು ವಿಚಿತ್ರ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಊರಲ್ಲಿ ಇಂದಿರಾ ಗಾಂಧಿಯ ಪ್ರತಿಮೆ ಮಾಡಿಸಿದ್ದೇನೆ. ಅದನ್ನು ತೋರಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿಸಿ ಎಂದು ಮನವಿ ಮಾಡಿದ್ದಾರೆ. ಅದಕ್ಕೆ ಸಿಎಂ ಆಯ್ತಪ್ಪಾ ನೋಡೋಣ ಎಂದು ಹೇಳಿ ಕಳುಹಿಸಿದ್ದಾರೆ.
2028ಕ್ಕೆ ನೀವೇ ಸಿಎಂ ಆಗಬೇಕು :ಜನಸ್ಪಂದನ ವೇಳೆ ಮೈಸೂರು ಜಿಲ್ಲೆಯ ಟಿ.ನರಸೀಪುರದ ಲಿಂಗಯ್ಯ ಎಂಬವರು 2028ಕ್ಕೆ ನೀನೇ ಸಿಎಂ ಆಗಬೇಕು. ನಿಮ್ಮನ್ನು ಬಿಟ್ಟು ಬೇರೆ ಯಾರಿಗೂ ರಾಜ್ಯವನ್ನು ಆಳ್ವಿಕೆ ಮಾಡಲು ಆಗುವುದಿಲ್ಲ. 35 ವರ್ಷದಿಂದ ಕಾಂಗ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದೇನೆ. ಎಡ ಗೈ ಸಮುದಾಯದವನಾಗಿದ್ದೇನೆ. ನಮ್ಮ ಅಳಿಯ ಶಿವಣ್ಣ ಎಂಬವರಿಗೆ ಮೈಸೂರು ಜಿಲ್ಲೆಯ ಯಾವುದಾದರೊಂದು ಸಮಿತಿಗೆ ಸದಸ್ಯರನ್ನಾಗಿ ನೇಮಿಸುವಂತೆ ಮನವಿ ಮಾಡಿದ್ದಾರೆ.
ನಿಗಮ ಮಂಡಳಿ ಸದಸ್ಯತ್ವಕ್ಕೆ ಬೇಡಿಕೆ :ನಿಗಮ ಮಂಡಳಿ, ಸಮಿತಿಗಳಿಗೆ ಸದಸ್ಯರನ್ನಾಗಿ ನೇಮಕ ಮಾಡುವಂತೆಯೂ ಕೆಲ ಕಾಂಗ್ರೆಸ್ ಕಾರ್ಯಕರ್ತರು ಜನಸ್ಪಂದನದ ವೇಳೆ ಸಿಎಂ ಮುಂದೆ ಬೇಡಿಕೆ ಇಡುತ್ತಿರುವ ಘಟನೆಗಳು ನಡೆದವು. ಇದಕ್ಕೆ ಆಯ್ತಪ್ಪಾ ಹೋಗು ನೋಡೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಿಎಂ ನಿಧಿಯಿಂದ ಹಣ ಮಂಜೂರಾತಿ :ಇನ್ನು ಇದೇ ವೇಳೆ ಆರು ತಿಂಗಳ ಮಗುವಿಗೆ ಹೃದಯದಲ್ಲಿ ರಂದ್ರ ಇರುವುದಾಗಿ ಸಿಎಂ ಮುಂದೆ ಗದಗ ಮೂಲದ ಅಂಜಲಿಯವರು, ಮಗು ಮೇಘಶ್ರೀ ಚಿಕಿತ್ಸೆಗಾಗಿ ಹಣ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಎಂ ಪರಿಹಾರ ನಿಧಿಯಿಂದ 2 ಲಕ್ಷ ರೂ. ಮಂಜೂರು ಮಾಡಿದರು. ಮೂರು ಆಪರೇಷನ್ ಆಗಿದ್ದು, ಮತ್ತೊಂದು ಆಪರೇಷನ್ ಆಗಬೇಕಿದೆ. ಮಗು ನಾಲ್ಕು ತಿಂಗಳದ್ದಾಗಿನಿಂದಲೇ ಆಪರೇಷನ್ ಮಾಡಿಸಲಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ನಿವೇಶನ ಹಂಚಿಕೆಗಾಗಿ ಅಲೆದಾಟ :ಹಿರಿಯ ನಾಗರಿಕ ಸುಬ್ರಮಣ್ಯಂ ಸಿಎಸ್ ಎಂಬವರು ವಿಶ್ವಭಾರತಿ ಸೊಸೈಟಿಯಲ್ಲಿ ನಿವೇಶನ ಹಂಚಿಕೆಯಾದರೂ ನಿವೇಶನ ಸಿಗದೇ ಅಲೆದಾಟ ಮಾಡುತ್ತಿರುವುದಾಗಿ ತಮ್ಮ ನೋವನ್ನು ಹೇಳಿಕೊಂಡರು. 30 ವರ್ಷದಿಂದ ನಿವೇಶನಕ್ಕಾಗಿ ಅಲೆದಾಟ ಮಾಡುತ್ತಿದ್ದೇನೆ. ಕೋರ್ಟ್ ನಲ್ಲಿ ನಮ್ಮ ಪರವಾಗಿ ತೀರ್ಪು ನೀಡಿದರೂ ಇನ್ನೂ ನಿವೇಶನ ನಮಗೆ ಸಿಕ್ಕಿಲ್ಲ. ಆ ನಿವೇಶನದಲ್ಲಿ ಬೇರೆಯವರು ಮನೆ ಕಟ್ಟಿದ್ದಾರೆ ಎಂದು ದೂರು ನೀಡಿದರು. ಸಿಎಂ ಬಿಡಿಎ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ್ದಾರೆ.
ಮಗನಿಂದ ಹೊರಹಾಕಲ್ಪಟ್ಟ ತಾಯಿಯಿಂದ ಮೊರೆ :ತಿಪಟೂರು ಮೂಲದ ಮಹದೇವಮ್ಮ ಎಂಬ ಮಹಿಳೆ ಸಿಎಂ ಮುಂದೆ ಬಂದು, ಮಗ ಎಲ್ಲಾ ಆಸ್ತಿ ಬರೆಸಿಕೊಂಡು ನನ್ನನ್ನು ಹೊರ ಹಾಕಿದ್ದಾನೆ. ಎಸಿ ಕೋರ್ಟ್ ನಲ್ಲಿ ಕೇಸ್ ಹಾಕಿದ್ದೇವೆ ಎಂದರು. ಈ ಸಂದರ್ಭದಲ್ಲಿ ಪೊಲೀಸರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಸಿಎಂ ತುಮಕೂರು ಡಿಸಿಗೆ ಸೂಚನೆ ನೀಡಿದರು. ಮತ್ತೊಂದೆಡೆ ರಾಮನಗರದ ಸುಗ್ಗನಹಳ್ಳಿಯ ರಾಜಮ್ಮ ಎಂಬವರು ತನ್ನ ಜಮೀನು ಒತ್ತುವರಿ ಮಾಡಲಾಗಿದೆ ಎಂದು ದೂರು ನೀಡಿದರು. ಒತ್ತುವರಿ ತೆರವು ಮಾಡಲು ಸಿಎಂ ಡಿಸಿಗೆ ಸೂಚಿಸಿದರು.
ಇದನ್ನೂ ಓದಿ :ಸಿಎಂ ಜನತಾ ದರ್ಶನ: ಜನರಿಂದ ಸಮಸ್ಯೆಗಳ ಸುರಿಮಳೆ, ಪರಿಹಾರಕ್ಕೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ