ಬೆಂಗಳೂರು: 2013-2018ರವರೆಗಿನ ಸಿದ್ಧರಾಮಯ್ಯ ಆಡಳಿತದ ಅವಧಿಯಲ್ಲಿ ನಡೆದಿರುವ 10 ಬೃಹತ್ ಹಗರಣಗಳಿಗೆ ಸಂಬಂಧಿಸಿದಂತೆ ಒಟ್ಟು 3,728 ಪುಟಗಳ ಸಂಪೂರ್ಣ ದಾಖಲೆ ಸಹಿತ 10 ಪ್ರತ್ಯೇಕ ದೂರುಗಳನ್ನು ಲೋಕಾಯುಕ್ತಕ್ಕೆ ನೀಡಲಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಹೇಳಿದರು. ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಇಂದು ಮಾಧ್ಯಮಗಳ ಮುಂದೆ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ಕೃಷ್ಣ ಭೈರೇಗೌಡ, ಯು.ಟಿ. ಖಾದರ್, ಎಂ.ಬಿ. ಪಾಟೀಲ್, ಜಮೀರ್ ಅಹ್ಮದ್, ದಿನೇಶ್ ಗುಂಡೂರಾವ್, ಎಂ.ಕೃಷ್ಣಪ್ಪ ಹಾಗೂ ಶಾಸಕರಾದ ಎನ್.ಎ.ಹ್ಯಾರೀಸ್, ಮಾಜಿ ಶಾಸಕ ಪ್ರಿಯಾ ಕೃಷ್ಣ ಸೇರಿದಂತೆ ಹಲವು ಭ್ರಷ್ಟ ರಾಜಕಾರಣಿಗಳ ವಿರುದ್ಧ ದೂರು ನೀಡಲಾಗಿದೆ.
ಹಿರಿಯ ಅಧಿಕಾರಿಗಳಾದ ಪಾಂಡುರಂಗ ಬಿ.ನಾಯಕ್, ಜಿ.ಸತೀಶ್, ಅತುಲ್ ಕುಮಾರ್ ತಿವಾರಿ, ವಸ್ತ್ರದ್, ವಿ.ಶಂಕರ್, ಮನೋಜ್ ರಾಜನ್, ಪಿ.ಬೋರೇಗೌಡ, ಲೀಲಾ ಸಂಪಿಗೆ, ಚಲುವರಾಜು ಮತ್ತು ಕೃಷ್ಣಮೂರ್ತಿ ವಿರುದ್ಧ ದೂರುಗಳನ್ನು ಕೊಡಲಾಗಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ವಿರುದ್ಧವೂ ಸಹ ಸರ್ಕಾರದ ಭೂ ಕಬಳಿಕೆ ಹಿನ್ನೆಲೆ ಪ್ರಕರಣದ ದೂರು ದಾಖಲಿಸಲಾಗಿದೆ ಎಂದರು.
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಎನ್ ಆರ್ ರಮೇಶ್ ಗಂಭೀರ ಆರೋಪ:2017-18 ಮತ್ತು 2018-19ರ 17 ತಿಂಗಳ ಅವಧಿಯಲ್ಲಿ 189 ಇಂದಿರಾ ಕ್ಯಾಂಟೀನ್ಗಳಲ್ಲಿ ಪ್ರತೀ ತಿಂಗಳು ಸರಾಸರಿ 27,03,200 ಮಂದಿ ಬೆಳಗಿನ ಉಪಹಾರವನ್ನು, 24,11,800 ಮಂದಿ ಊಟವನ್ನು ಮತ್ತು 11,55,500 ಜನರು ರಾತ್ರಿಯ ಊಟವನ್ನು ಮಾಡುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಗಳನ್ನು ನೀಡಲಾಗಿದೆ. ಸರ್ಕಾರದಿಂದ ಸಬ್ಸಿಡಿ ರೂಪದಲ್ಲಿ 17 ತಿಂಗಳ ಅವಧಿಯಲ್ಲಿ 560 ಕೋಟಿ ರೂಪಾಯಿ ಹಣವನ್ನು ಕಬಳಿಸಲಾಗಿದೆ ಎಂದು ಆರೋಪಿಸಿದರು.
2015-16ರಿಂದ 2016-17ರವರೆಗಿನ ಎರಡು ವರ್ಷಗಳ ಅವಧಿಯಲ್ಲಿ ಪಾಲಿಕೆ ವ್ಯಾಪ್ತಿಯ ಒಟ್ಟು 439 ಬಸ್ ತಂಗುದಾಣಗಳನ್ನು ತನ್ನ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡುವ ಸಲುವಾಗಿ ಅಂದಿನ ಬಳಸಿಕೊಂಡಿದೆ. ಸಿದ್ದರಾಮಯ್ಯ ನೇತೃತ್ವದ ಅಂದಿನ ರಾಜ್ಯ ಸರ್ಕಾರವು ನಿಯಮಾನುಸಾರ ಪಾಲಿಕೆಗೆ ಪಾವತಿಸಬೇಕಿದ್ದ 68.15 ಕೋಟಿ ರೂ. ಜಾಹಿರಾತು ಶುಲ್ಕವನ್ನು ವಂಚಿಸಿದೆ. ಕೃಷಿ ಭಾಗ್ಯ ಯೋಜನೆಯಲ್ಲಿ 2014-15ರಿಂದ 2017-18ರ 4 ವರ್ಷಗಳ ಅವಧಿಯಲ್ಲಿ ಕೃಷಿ ಇಲಾಖೆಯ ವತಿಯಿಂದ ರೈತರಿಗೆ ಉಚಿತವಾಗಿ ರಾಜ್ಯದ 30 ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 2,15,130 ಕೃಷಿ ಹೊಂಡಗಳ ನಿರ್ಮಾಣ ಮತ್ತು ಅದಕ್ಕೆ ಸಂಬಂಧಿಸಿದಂತೆ ಪಾಲಿಥೀನ್ ಹೊದಿಕೆ, ಡೀಸಲ್ ಪಂಪ್ ಸೆಟ್ಗಳ ಅಳವಡಿಕೆ, ಲಘು ನೀರಾವರಿ ಕಾರ್ಯ, ಕೃಷಿ ಹೊಂಡದ ಸುತ್ತಲೂ ನೆರಳು ಪರದೆಗಳ ನಿರ್ಮಾಣ ಕಾರ್ಯಗಳ ಅನುಷ್ಠಾನದ ಹೆಸರಿನಲ್ಲಿ 800 ಕೋಟಿ ರೂಪಾಯಿಗಳನ್ನು ಲೂಟಿ ಮಾಡಲಾಗಿದೆ ಎಂದು ಎನ್ ಆರ್ ರಮೇಶ್ ದೂರಿದರು.