ಬೆಂಗಳೂರು :ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಸೇರಿದಂತೆ ಜೆಡಿಎಸ್ ನಾಯಕರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟಿಸುತ್ತಿರುವ ಪ್ರಶಾಂತ್ ಸಂಬರಗಿ ವಿರುದ್ಧ ಜೆಡಿಎಸ್ನ ಕಾನೂನು ಘಟಕ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಅವರಿಗೆ ದೂರು ನೀಡಿದೆ.
ಮಾಜಿ ಪ್ರಧಾನಿಗಳಾದ ಹೆಚ್. ಡಿ. ದೇವೇಗೌಡರ ಬಗ್ಗೆ ಮಾನಹಾನಿಕರ ಪೋಸ್ಟ್ ಹಾಕಿ ತೇಜೋವಧೆ ಮಾಡಲಾಗಿದೆ. ಕಳೆದ ಒಂದು ತಿಂಗಳಿನಿಂದಲೂ ನಿರಂತರವಾಗಿ ಜೆಡಿಎಸ್ ನಾಯಕರ ಬಗ್ಗೆ ಅವಹೇಳನಕರ ಪೋಸ್ಟ್ ಪ್ರಕಟಿಸುತ್ತಿದ್ದಾರೆ. ಮಾತ್ರವಲ್ಲದೇ ಧರ್ಮಗಳ ನಡುವೆ, ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಪ್ರಶಾಂತ್ ಸಂಬರಗಿಯನ್ನು ಗಡಿಪಾರು ಮಾಡಬೇಕು, ಮತ್ತು ಅವರ ಸಾಮಾಜಿಕ ಜಾಲತಾಣದ ಖಾತೆಗಳನ್ನ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ. ಪಿ. ರಂಗನಾಥ್, ವಕ್ತಾರ ಗಂಗಾಧರ್ ಮೂರ್ತಿ ಸೇರಿದಂತೆ ಹಲವರು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡರ ಬಳಿ ದೂರು ಸಲ್ಲಿಸಿದ್ದಾರೆ.
ಈ ಹಿಂದೆ ಪ್ರಶಾಂತ್ ವಿರುದ್ಧ ದೂರು ನೀಡಿದ್ದ ಫಿಲಂ ಚೇಂಬರ್: ಕರ್ನಾಟಕ ಫಿಲಂ ಚೇಂಬರ್ ವಿರುದ್ಧ ಅಧಾರವಿಲ್ಲದೆ ಪ್ರಶಾಂತ್ ಸಂಬರಗಿ ಅವರು ಅರೋಪ ಮಾಡ್ತಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಗಿನ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ದೂರು ನೀಡಿದ್ದರು. ವಾಣಿಜ್ಯ ಮಂಡಳಿ ಅಧ್ಯಕ್ಷರ ನೇತೃತ್ವದಲ್ಲಿ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷ ರಾಮಕೃಷ್ಣ ತೆರಳಿ ಆಗಿನ ನಗರ ಕಮಿಷನರ್ ಕಮಲ್ ಪಂತ್ ಅವರಿಗೆ ದೂರು ನೀಡಿದ್ದರು.