ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಸೈಟ್​ ಕೊಡಿಸೋದಾಗಿ ₹30 ಲಕ್ಷ ವಂಚನೆ: ಅಮೆರಿಕದಿಂದ ಪೊಲೀಸ್ ಕಮೀಷನರ್​ಗೆ ದೂರು ನೀಡಿದ ವ್ಯಕ್ತಿ - ​ ETV Bharat Karnataka

ಖಾಸಗಿ ರಿಯಲ್​ ಎಸ್ಟೇಟ್​ ಕಂಪನಿಯೊಂದು ನಿವೇಶನ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿರುವ ಆರೋಪ ಕೇಳಿಬಂದಿದೆ.

ಬೆಂಗಳೂರಿನಲ್ಲಿ ನಿವೇಶನ ಕೊಡಿಸುವುದಾಗಿ ವಂಚನೆ
ಬೆಂಗಳೂರಿನಲ್ಲಿ ನಿವೇಶನ ಕೊಡಿಸುವುದಾಗಿ ವಂಚನೆ

By ETV Bharat Karnataka Team

Published : Dec 6, 2023, 8:06 PM IST

ಬೆಂಗಳೂರಿನಲ್ಲಿ ನಿವೇಶನ ಕೊಡಿಸುವುದಾಗಿ ವಂಚನೆ

ಬೆಂಗಳೂರು : ನಿವೇಶನ ಕೊಡಿಸುವುದಾಗಿ ನಂಬಿಸಿ ಹಂತ-ಹಂತವಾಗಿ 30 ಲಕ್ಷ ರೂ. ಹಣ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದ್ದು, ನ್ಯಾಯ ಕೊಡಿಸುವಂತೆ ಅಮೆರಿಕದಿಂದ ವಂಚನೆಗೊಳಗಾದ ಬೆಂಗಳೂರು ಮೂಲದ ಅನಿವಾಸಿ ಭಾರತೀಯ (ಎನ್​ಆರ್​ಐ) ನಗರ ಪೊಲೀಸ್ ಆಯುಕ್ತರಿಗೆ ಎಕ್ಸ್​ ಪೋಸ್ಟ್​ ಮೂಲಕ ಮನವಿ ಮಾಡಿದ್ದಾರೆ.

ರಾಘವೇಂದ್ರ ಪ್ರಸಾದ್ ಎಂಬುವರು ಅಮೆರಿಕದಲ್ಲಿ ಹಲವು ವರ್ಷಗಳಿಂದ ಕಂಪೆನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದು, ಸೈಟು ನೀಡುವುದಾಗಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಜೆಪಿ ನಗರದಲ್ಲಿರುವ ಖಾಸಗಿ ಕಂಪನಿ ಮಾಲೀಕರಾದ ಅರವಿಂದ್ ಹಾಗೂ ಹರಿಕೃಷ್ಣ ಎಂಬುವರು ತಮಗೆ 30 ಲಕ್ಷ ರೂ. ವಂಚಿಸಿದ್ದಾರೆ ಎಂದು ಟ್ವೀಟ್ ಮಾಡಿ ದೂರು ನೀಡಿದ್ದಾರೆ.

ಹಲವು ವರ್ಷಗಳಿಂದ ಅಮೆರಿಕದ ಕಂಪೆನಿಯೊಂದರಲ್ಲಿ ರಾಘವೇಂದ್ರ ಅವರು ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪೋಷಕರು ಹಾಗೂ ಸಂಬಂಧಿಗಳೆಲ್ಲರೂ ಬೆಂಗಳೂರಲ್ಲಿದ್ದಾರೆ. ಹೀಗಾಗಿ ಸ್ವಂತ ಮನೆ ಕಟ್ಟುವ ಸಲುವಾಗಿ ನಿವೇಶನ ಖರೀದಿಗೆ ಮುಂದಾಗಿದ್ದರು. ಈ ವೇಳೆ ರಿಯಲ್​ ಎಸ್ಟೇಟ್​ ಕಂಪೆನಿಯು ಕೆಂಗೇರಿಯಲ್ಲಿ ರಾಯಲ್ ನಿಸರ್ಗ ಲೇಔಟ್ ನಲ್ಲಿ ಸೈಟುಗಳಿವೆ ಎಂದು ಜಾಹೀರಾತು ನೀಡಿತ್ತು. ಈ ಬಗ್ಗೆ ವಿಚಾರಿಸಿ ಕಂಪೆನಿಯೊಂದಿಗೆ ಮಾತುಕತೆ ಬಳಿಕ 2022 ರ ಡಿಸೆಂಬರ್ ನಲ್ಲಿ 30 ಲಕ್ಷಕ್ಕೆ ಸೈಟು ಖರೀದಿಗೆ ಒಪ್ಪಂದವಾಗಿತ್ತು. ಹಂತ-ಹಂತವಾಗಿ ರಾಘವೇಂದ್ರ ಅವರು 30 ಲಕ್ಷ ಹಣವನ್ನ ಕಂಪೆನಿಗೆ ಪಾವತಿಸಿದ್ದರು.

ಕಾಲಕ್ರಮೇಣ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದ ಕಂಪೆನಿಯು ಕೊಟ್ಟ ಮಾತಿನಂತೆ ನಡೆದುಕೊಂಡಿರಲಿಲ್ಲ. ಅಲ್ಲದೆ ಸೈಟು ನೋಂದಣಿ ಮಾಡಿಸದೆ ತಿಂಗಳುಗಟ್ಟಲೇ ಕಂಪೆನಿಯು ಅಲೆದಾಡಿಸಿತ್ತು. ಈ ಬಗ್ಗೆ ಕುಟುಂಬಸ್ಥರು ವಿಚಾರಿಸಿದರೂ ಪ್ರಯೋಜನವಾಗಿರಲಿಲ್ಲ. ಅಂತಿಮವಾಗಿ ಸೈಟು ಬೇಡ ಎಂದು ನಿರ್ಧರಿಸಿ ನೀಡಿದ ಹಣವನ್ನು ವಾಪಸ್ ಕೊಡುವಂತೆ ಮನವಿ ಮಾಡಿದರೂ ರಿಫಂಡ್ ಮಾಡದೆ ಯಾಮಾರಿಸಿದೆ. ಈ ಬಗ್ಗೆ ಜೆ.ಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ರಾಘವೇಂದ್ರ ಆರೋಪಿಸಿದ್ದಾರೆ.

ವಂಚನೆ ಎಸಗಿದ ಕಂಪೆನಿ ಮೇಲೆ ಕಾನೂನು ಕ್ರಮ ಜರುಗಿಸಿ ಹಣ ವಾಪಸ್ ನೀಡಿಸುವಂತೆ ಪೊಲೀಸರಲ್ಲಿ ಮನವಿ ಮಾಡಿರುವ ರಾಘವೇಂದ್ರ, ಅಲ್ಲದೆ ಇದೇ ರೀತಿ ಹಲವು ಗ್ರಾಹಕರಿಗೆ ಕಂಪೆನಿ ವಂಚಿಸಿರುವುದಾಗಿ ದೂರಿದ್ದಾರೆ.

ಇದನ್ನೂ ಓದಿ :ಟಿಕೆಟ್ ಕೊಡಿಸುವುದಾಗಿ ವಂಚನೆ ಪ್ರಕರಣ: ಚೈತ್ರಾಗೆ ಜಾಮೀನು ಮಂಜೂರು

ABOUT THE AUTHOR

...view details