ಬೆಂಗಳೂರು:ನಟಿ ರಾಗಿಣಿ ಆಪ್ತ ವಿರೇನ್ ಖನ್ನಾ ಮನೆ ಮೇಲೆ ದಾಳಿ ವೇಳೆ ಕರ್ನಾಟಕ ಪೊಲೀಸ್ ಸಮವಸ್ತ್ರ ಪತ್ತೆಯಾದ ಕಾರಣ ಸಿಸಿಬಿ ಪೊಲೀಸರು ವಿರೇನ್ ಖನ್ನಾ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಕೇಸ್ ದಾಖಲಿಸಲಾಗಿದೆ.
ಈತ ಪೊಲೀಸ್ ಬಟ್ಟೆ ಹಾಕಿಕೊಂಡ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ದುರ್ಬಳಕೆ ಮಾಡಿದ್ದು, ಹಾಗೆ ಹುಡುಗಿಯರ ಜೊತೆ ಫೋಟೋ ಹಾಕಿ ಬಿಟ್ಟಿ ಪಬ್ಲಿಸಿಟಿ ತೆಗೆದುಕೊಂಡಿದ್ದಾನೆ.
ಪೊಲೀಸರ ಯುನಿಫಾರ್ಮ್ ಬಳಸಿ, ದುಷ್ಕೃತ್ಯ ನಡೆಸುವುದು ಅಪರಾಧವಾಗಿರುವ ಕಾರಣ ಕೇಸ್ ದಾಖಲಾಗಿದೆ. ಸ್ಯಾಂಡಲ್‌ವುಡ್ ಡ್ರಗ್ಸ್ ಲಿಂಕ್ ಆರೋಪ ಪ್ರಕರಣದಲ್ಲಿ ಒಂದು ರೀತಿ ಕೇಂದ್ರ ಬಿಂದುವಿನಂತೆ ಕಾಣ್ತಿರೋ ವಿರೇನ್ ಖನ್ನಾ ಮನೆ ಮೇಲೆ ನಿನ್ನೆ ಬೆಳ್ಳಂಬೆಳಗ್ಗೆ ದಾಳಿ ನಡೆಸಲಾಗಿತ್ತು.
ಸಿಸಿಬಿ ಇನ್ಸ್ಪೆಕ್ಟರ್ ಮಹಮದ್ ಸಿರಾಜ್ ಮತ್ತು ಶ್ರೀಧರ್ ಪೂಜಾರ್ ನೇತೃತ್ವದಲ್ಲಿ ನಡೆದಿದ್ದ ದಾಳಿ ಸತತ 8 ಗಂಟೆಗಳ ಪರಿಶೀಲನೆ ಬಳಿಕ ದಾಳಿ ಅಂತ್ಯಗೊಳಿಸಿದ್ದರು. ದಾಳಿ ವೇಳೆ ಗಾಂಜಾ, ಗಾಂಜಾ ಸೇದಲು ಬಳಸಿದ್ದ ಸಿಗರೇಟ್ ತುಂಡು, ಗಾಂಜಾ ಸೇದುವ ಚಿಮಣಿ, ಸಿರಿಂಜ್ ನೀಡಲ್ ಪತ್ತೆಯಾಗಿದೆ. ಇಷ್ಟೇ ಅಲ್ಲದೇ ಈಜಿಪ್ಟ್, ಶ್ರೀಲಂಕಾ, ಇಂಗ್ಲೆಂಡ್ ಸೇರಿದಂತೆ 7 ದೇಶಗಳ ವಿವಿಧ ಮುಖಬೆಲೆಯ 12 ನೋಟುಗಳು ಸಹ ಪತ್ತೆಯಾಗಿವೆ ಎನ್ನಲಾಗ್ತಿದೆ.
ವಿಚಿತ್ರವೆಂದರೆ ಖನ್ನಾ ಮನೆಯಲ್ಲಿ ಸಿಕ್ಕ ಕರ್ನಾಟಕ ಪೊಲೀಸರ ಎರಡು ಜೊತೆ ಸಮವಸ್ತ್ರದ ಬಗ್ಗೆ ಕುತೂಹಲ ಮೂಡಿದೆ. ಸಮವಸ್ತ್ರದಲ್ಲಿದ್ದ ಪೊಲೀಸ್ ಲೋಗೋ, ಖಾಕಿ ಬೆಲ್ಟ್ ಮತ್ತು ಕ್ಯಾಪ್ ಅನ್ನು ವಶಕ್ಕೆ ಪಡೆಯಲಾಗಿದೆ.
ಅನುಮತಿಯಿಲ್ಲದೆ ಪೊಲೀಸ್ ಲೋಗೊ ಬಳಸುವಂತಿಲ್ಲ. ಈ ಹಿನ್ನೆಲೆ ವಿರೇನ್ ಖನ್ನಾ ಸಿಸಿಬಿ ಅಧಿಕಾರಿಗಳ ವಿಚಾರಣೆಯಲ್ಲಿ ಇದೆಲ್ಲದಕ್ಕೂ ಉತ್ತರ ನೀಡಬೇಕಿದೆ.