ಬೆಂಗಳೂರು:ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪ ಹೊತ್ತಿರುವ ಬಿಬಿಎಂಪಿಯ ನಾಲ್ವರು ಜೆಡಿಎಸ್ ಸದಸ್ಯರನ್ನು ಅನರ್ಹಗೊಳಿಸುವಂತೆ ಜೆಡಿಎಸ್, ಬಿಬಿಎಂಪಿ ಚುನಾವಣಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತರಿಗೆ ಪತ್ರದ ಮೂಲಕ ಮನವಿ ಮಾಡಿದೆ.
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡ ಆರೋಪ ಇರುವ ಮಂಜುಳಾ. ಎನ್ ಸ್ವಾಮಿ, ಕೆ.ದೇವದಾಸ್, ಹೇಮಲತಾ. ಎಸ್.ಪಿ ಹಾಗೂ ಎಂ.ಮಹದೇವ್ ಅವರನ್ನು ಅನರ್ಹಗೊಳಿಸಬೇಕು. ಜೊತೆಗೆ ಈ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರ ಚುನಾವಣಾ ಪ್ರಕ್ರಿಯೆಯಿಂದ ಹೊರಗಿಡಬೇಕೆಂದು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ಡಿ. 30ರಂದು ನಡೆಯಲಿರುವ ಸ್ಥಾಯಿ ಸಮಿತಿ ಚುನಾವಣೆಗಳನ್ನು ಮುಂದೂಡಬೇಕೆಂದು ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್. ಪ್ರಕಾಶ್ ಅವರು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಿರುವ ಪತ್ರದಲ್ಲಿ ಕೋರಿದ್ದಾರೆ.
ಬಿಬಿಎಂಪಿಯ ನಾಲ್ವರು ಜೆಡಿಎಸ್ ಸದಸ್ಯರನ್ನು ಅನರ್ಹಗೊಳಿಸುವಂತೆ ಚುನಾವಣಾಧಿಕಾರಿಗೆ ದೂರು ಈ ನಾಲ್ವರು ಸದಸ್ಯರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಮತ್ತು ಪೌರಾಡಳಿತ ಕರ್ನಾಟಕ ಸ್ಥಳೀಯ ಪ್ರಾಧಿಕಾರ (ಪಕ್ಷಾಂತರ ನಿಷೇಧ) ಅಧಿನಿಯಮ 1989ರ ನಿಯಮ 3(1)(ಎ)(ಬಿ) ಅನ್ವಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಕಳೆದ 2018-19ನೇ ಸಾಲಿನ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಲಗ್ಗೆರೆ ವಾರ್ಡ್ ಸದಸ್ಯರಾದ ಮಂಜುಳಾ.ಎನ್ ಸ್ವಾಮಿ ಹಾಗೂ ಬಿಟಿಎಂ ಲೇಔಟ್ ವಾರ್ಡ್ ಸದಸ್ಯರಾದ ಕೆ.ದೇವದಾಸ್ ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ. ಹಾಗೆಯೇ 2019-20ರಲ್ಲಿ ನಡೆದ ಮೇಯರ್ - ಉಪಮೇಯರ್ ಚುನಾವಣೆಯಲ್ಲಿ ವೃಷಭಾವತಿನಗರ ವಾರ್ಡ್‌ನ ಸದಸ್ಯೆ ಹೇಮಲತಾ ಹಾಗೂ ಮಾರಪ್ಪ ವಾರ್ಡ್‌ನ ಸದಸ್ಯರಾದ ಎಂ.ಮಹದೇವ್ ಅವರು ಕೂಡ ವಿಪ್ ಉಲ್ಲಂಘಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ನಡೆದ ವಿಧಾನಸಭೆ ಉಪಚುನಾವಣೆ ಸಂದರ್ಭದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದಾರೆ ಎಂದು ಪತ್ರದಲ್ಲಿ ದೂರಿದ್ದಾರೆ.