ಬೆಂಗಳೂರು: "ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮಂಡ್ಯದಲ್ಲಿ ನಡೆದ ಹನುಮ ಸಂಕೀರ್ತನಾ ಯಾತ್ರೆಯಲ್ಲಿ ಮುಸ್ಲಿಂ ಮಹಿಳೆಯರಿಗೆ ಅಗೌರವ ಉಂಟುಮಾಡುವ ಹೇಳಿಕೆ ನೀಡಿದ್ದು, ಅವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು" ಎಂದು ಆಮ್ ಆದ್ಮಿ ಪಕ್ಷದ ಅಲ್ಪಸಂಖ್ಯಾತರ ಘಟಕದ ಮುಖಂಡ ಉಸ್ಮಾನ್ ನರಸಿಂಹಯ್ಯ ಒತ್ತಾಯಿಸಿದರು.
ನಗರದ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದೂರು ದಾಖಲಿಸಿದ ಬಳಿಕ ಮಾತನಾಡಿದ ಅವರು, "ಸೀತೆಯನ್ನು ಲಂಕೆಯಿಂದ ಕರೆತರುವಲ್ಲಿ ಸಹಾಯ ಮಾಡಿದ ಹನುಮನ ಕಾರ್ಯಕ್ರಮದಲ್ಲಿ ಪ್ರಭಾಕರ್ ಭಟ್, ಮುಸ್ಲಿಂ ಮಹಿಳೆಯರಿಗೆ ಮೋದಿ ಬಂದ ಮೇಲೆ ಪರ್ಮನೆಂಟ್ ಗಂಡ ಸಿಕ್ಕಿದ್ದು ಎಂಬ ಹೇಳಿಕೆ ನೀಡಿರುವುದು ಅಕ್ಷಮ್ಯ. ಪ್ರಭಾಕರ್ ಭಟ್ ಈ ರೀತಿ ಮಾತನಾಡಿದ್ದರೂ ಬಿಜೆಪಿ ಮುಖಂಡರು ಯಾಕೆ ಸುಮ್ಮನಿದ್ದಾರೆ?. ಬಿಜೆಪಿ ಅಲ್ಪಸಂಖ್ಯಾತ ಘಟಕ ಸತ್ತು ಹೋಗಿದೆ, ಅವರೆಲ್ಲಾ ದುಡ್ಡಿಗಾಗಿ ಕೆಲಸ ಮಾಡುತ್ತಿರುವ ಕೂಲಿಯಾಳುಗಳು" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಪ್ರಭಾಕರ್ ಭಟ್ ಅವರು ಮಹಿಳಾ ನಿಂದನೆ, ಜಾತಿ ನಿಂದನೆ, ಧರ್ಮ ನಿಂದನೆ ಮಾಡಿದ್ದು, ಈ ರೀತಿ ಹೇಳಿಕೆ ನೀಡುವವರು ದೇಶ ದ್ರೋಹಿ, ಧರ್ಮ ದ್ರೋಹಿಯಾದ್ದಾರೆ. ಅವರನ್ನು ಕೂಡಲೇ ಬಂಧಿಸಿ ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು" ಎಂದರು.