ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರಿಗೆ ಹಣ ನೀಡಲು ಬಿಜೆಪಿ ಸರ್ಕಾರ ವ್ಯಾಪಕವಾಗಿ ಭ್ರಷ್ಟಾಚಾರ ಎಸಗುತ್ತಿದೆ. ಅಕ್ರಮದಲ್ಲಿ ಭಾಗಿಯಾಗಿರುವ ಬಿಜೆಪಿ ನಾಯಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ನಿಯೋಗ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದೆ.
ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಿಂದ ಹೊರಟ ನಿಯೋಗವು ಹೈಗ್ರೌಂಡ್ ಪೊಲೀಸ್ ಠಾಣೆಗೆ ತೆರಳಿ ಭ್ರಷ್ಟಾಚಾರ ಹಾಗೂ ಅಕ್ರಮದಲ್ಲಿ ತೊಡಗಿಕೊಂಡಿರುವ ಬಿಜೆಪಿ ನಾಯಕರನ್ನು ಬಂಧಿಸಬೇಕೆಂದು ಒತ್ತಾಯಿಸಿತು. ಅಕ್ರಮವೆಸಗಿದ ನಾಯಕರು ಮಾತನಾಡಿದ ಆಡಿಯೋ ಹಾಗೂ ವಿಡಿಯೋ ಸೇರಿ ಅಗತ್ಯ ದಾಖಲಾತಿಗಳನ್ನು ಪೊಲೀಸರಿಗೆ ನೀಡಲಾಯಿತು.
ಮತದಾರರಿಗೆ ಆಮಿಷ:ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ "ಪ್ರಜಾಪ್ರಭುತ್ವದಲ್ಲಿ ಬಿಜೆಪಿ ನಡೆ ಗಮನಿಸುತ್ತಿದ್ದೇವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಕಾರಣಕ್ಕೂ ಗೆಲ್ಲುವುದಿಲ್ಲ. ಆದರೂ ಸರ್ಕಾರ ರಚನೆ ಮಾಡುವ ಸಂಕಲ್ಪ ಮಾಡಿದ್ದಾರೆ. ಇತ್ತೀಚೆಗೆ ಮೂರ್ನಾಲ್ಕು ಶಾಸಕರ ಹೇಳಿಕೆ ಗಮನಿಸಿದ್ದೇನೆ. ನಾವು ಸೋಲುತ್ತೇವೆ ಎಂದು ಮತದಾರರಿಗೆ ಆಮಿಷ ತೋರುತ್ತಿದ್ದಾರೆ. ಇದಕ್ಕಾಗಿ ಸಾವಿರಾರು ಕೋಟಿ ಸಂಗ್ರಹಿಸಿಕೊಂಡಿದ್ದಾರೆ ಎಂದು ದೂರಿದರು.
ದಾಖಲೆ ಸಮೇತ ದೂರು: ಶೇ40ರಷ್ಟು ಕಮಿಷನ್ ಮಾಡಿ ಆರು ಸಾವಿರ ಕೊಡ್ತೀವಿ ಅಂತಾ ಹೇಳಿರುವ ಆಡಿಯೋ ಹಾಗೂ ವಿಡಿಯೋ ದಾಖಲೆಗಳಿವೆ. ಹೀಗಾಗಿ ದಾಖಲೆ ಸಮೇತ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ. ಪೊಲೀಸರು ಎಫ್ಐಆರ್ ದಾಖಲಿಸಿ ಕೂಡಲೇ ತನಿಖೆ ಮಾಡಬೇಕು. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ಕೊಟ್ಟಿದ್ದೇವೆ. ಇವರೆಲ್ಲರ ಮೇಲೆ ಎಫ್ಐಆರ್ ಆಗಬೇಕು ಎಂದು ಒತ್ತಾಯಿಸಿದರು.
ಸಿಎಂ ಭ್ರಷ್ಟಾಚಾರದ ಪಿತಾಮಹ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭ್ರಷ್ಟಾಚಾರ ಪಿತಾಮಹ ಎಂದು ಡಿ.ಕೆ ಶಿವಕುಮಾರ್ ಆರೋಪಿಸಿದರು. ನಾವು ಹಿಂದೆ ಮಾಡಿದ್ವಿ ಅಂತಾ ನೀವು ಈಗ ಮಾಡ್ತಿರಾ ಎಂದು ಅವರು ಪ್ರಶ್ನಿಸಿದರು. ಇಂದು ರಾಷ್ಟ್ರೀಯ ಮತದಾರರ ದಿನ. ಹಾಗಾಗಿ ಇವತ್ತು ದೂರು ನೀಡಲಾಗಿದೆ. ಬಿಜೆಪಿ ಅಕ್ರಮ ತಡೆಗಟ್ಟಬೇಕು. ಈ ಬಗ್ಗೆ ನಾಳೆ ಸಭೆ ಇಟ್ಟುಕೊಂಡಿದ್ದೇವೆ. ಪಿಎಸ್ಐ ಹಗರಣದಲ್ಲಿ ಆರೋಪಿಯಿಂದ 76 ಲಕ್ಷ ವಸೂಲಿ ಆಗಿದೆ. ಸರ್ಕಾರವೇ ಇದರಲ್ಲಿ ಶಾಮಿಲಾಗಿದೆ.