ಬೆಂಗಳೂರು:ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ವಿರೋಧಿಸಿ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶ್ರೀರಾಮಸೇನೆ ಕಾರ್ಯಕರ್ತರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಶ್ರೀರಾಮ ಸೇನೆ ಸಂಘಟನೆಯ ಸಂಘಟನಾ ಕಾರ್ಯದರ್ಶಿ ಎಂ.ಲಕ್ಷ್ಮೀಶ್ ನೇತೃತ್ವದ ಸದಸ್ಯರ ತಂಡ ಬುಧವಾರ ದೂರು ನೀಡಿದೆ.
ದೂರಿನ ಸಾರಾಂಶ: ''ಸಮಾಜದಲ್ಲಿ ಕೋಮು ಸೌಹಾರ್ದವನ್ನು ಕದಡುವ ದುರುದ್ದೇಶವನ್ನಿಟ್ಟುಕೊಂಡು ಹಾಗೂ ಉದ್ದೇಶಪೂರ್ವಕವಾಗಿ ಸನಾತನ ಧರ್ಮವನ್ನು ಅವಮಾನಿಸುವ ಸಲುವಾಗಿ ಉದಯನಿಧಿ ಸ್ಟಾಲಿನ್ ಈ ರೀತಿ ಹೇಳಿಕೆ ನೀಡಿದ್ದಾರೆ. ಇವರ ಹೇಳಿಕೆಯಿಂದ ಸನಾತನ ಧರ್ಮದ ಧಾರ್ಮಿಕ ನಂಬಿಕೆಗೆ ಧಕ್ಕೆಯುಂಟಾಗಿದೆ.''
''ಸನಾತನ ಧರ್ಮಕ್ಕೆ ಅಪಮಾನ ಮಾಡಿದ್ದಲ್ಲದೇ ಅದನ್ನು ಮಾರಣಾಂತಿಕ ಡೆಂಗ್ಯೂ, ಮಲೇರಿಯಾ ಕಾಯಿಲೆಗೆ ಹೋಲಿಸಲಾಗಿದೆ. ಉದಯನಿಧಿ ಸ್ಟಾಲಿನ್ ಓರ್ವ ತಮಿಳುನಾಡಿನ ಚುನಾಯಿತ ಪ್ರತಿನಿಧಿಯಾಗಿದ್ದು, ಪ್ರಮಾಣವಚನ ಸ್ವೀಕರಿಸವ ಸಂದರ್ಭದಲ್ಲಿ ಭಾರತದ ಸಂವಿಧಾನಕ್ಕೆ ಬದ್ಧವಾಗಿರುವುದಾಗಿ ಹಾಗೂ ಸಂವಿಧಾನದ ಗೌರವವನ್ನು ಎತ್ತಿಹಿಡಿಯುವುದಾಗಿ ಹೇಳಿದ್ದು, ಈಗ ಆದೇ ಸಂವಿಧಾನದ ಅಡಿಯಲ್ಲಿ ಭಾರತದ ಎಲ್ಲಾ ಪ್ರಜೆಗಳಿಗೂ ಯಾವುದೇ ಧರ್ಮವನ್ನು ಅನುಸರಿಸುವ ನಂಬುವ ಅಧಿಕಾರವನ್ನು ಅವಹೇಳನ ಮಾಡಿದ್ದಾರೆ. ಉದಯನಿಧಿ ಹೇಳಿಕೆಯು ಅಸಂವಿಧಾನಿಕವಾಗಿದೆ. ಓರ್ವ ಜನಪ್ರತಿನಿಧಿಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು, ಜನರನ್ನು ಅಥವಾ ಸಭೆಗಳನ್ನುದ್ದೇಶಿಸಿ ಮಾತನಾಡುವಾಗ ಬಹಳ ಯೋಚಿಸಿ, ಜವಾಬ್ದಾರಿಯಿಂದ ಮಾತನಾಡಬೇಕಾಗುತ್ತಾದೆ. ಹಾಗಾಗಿ ಅವರ ಸನಾತನ ಧರ್ಮದ ಪದಬಳಕೆ ಮತ್ತು ಮಾತನ್ನು ಅವರು ಉದ್ದೇಶಪೂರ್ವಕವಾಗಿಯೇ ಆಡಿದ್ದು, ಅವರ ಈ ಕರೆಯು ಸಮಾಜದಲ್ಲಿ ಕೋಮು ದಂಗೆಗೆ ಕಾರಣವಾಗುತ್ತದೆ. ಅವರ ಈ ಹೇಳಿಕೆಯು ನನ್ನ ಮತ್ತು ನನ್ನಂಥಹ ಅನೇಕರ ಸನಾತನ ಧರ್ಮದ ಧಾರ್ಮಿಕ ನಂಬಿಕೆಗಳಿಗೆ ನೋವನ್ನುಂಟುಮಾಡಿದೆ. ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ'' ಎಂ. ಲಕ್ಷ್ಮೀಶ್ ನೇತೃತ್ವದ ಸದಸ್ಯರ ತಂಡ ದೂರು ನೀಡಿದೆ.