ಬೆಂಗಳೂರು : ಬಿಜೆಪಿ ನಾಯಕರ ಫೋಟೋ ತಿರುಚಿ, ಸುಳ್ಳು ಸುದ್ದಿ ಪ್ರಕಟಿಸಿದ ಆರೋಪದಡಿ ಕರ್ನಾಟಕ ಕಾಂಗ್ರೆಸ್‌ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳ ನಿರ್ವಾಹಕರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಮಾಜಿ ಸಚಿವರಾದ ಕೆ ಎಸ್ ಈಶ್ವರಪ್ಪ, ಸಿ ಟಿ ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಹಾಗೂ ಸಂಸದ ಪ್ರತಾಪ್ ಸಿಂಹ ಅವರ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡ ಆರೋಪದಡಿ ಬಿಜೆಪಿಯ ಕಾನೂನು ಪ್ರಕೋಷ್ಠದಿಂದ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿಜೆಪಿ ನಾಯಕರ ಫೋಟೋಗಳನ್ನು ಎಡಿಟ್ ಮಾಡಿ ದುರ್ಬಳಕೆ ಮಾಡಲಾಗುತ್ತಿದೆ. ಎಡಿಟೆಡ್ ಹಾಗೂ ತಿರುಚಿದ ಫೋಟೋಗಳ ಸಮೇತ ಪೋಸ್ಟ್ ಮಾಡಲಾಗುತ್ತಿದ್ದು, ರಾಜ್ಯದ ವಿವಿಧ ವರ್ಗದ ನಾಗರಿಕರ ನಡುವೆ ದ್ವೇಷವನ್ನ ಹುಟ್ಟುಹಾಕುವ ಹಾಗೂ ಶಾಂತಿ ಕದಡುವ ಕೆಲಸ ಮಾಡಲಾಗುತ್ತಿದೆ. ಹಾಗೂ ಬಿಜೆಪಿ ಹಿರಿಯ ನಾಯಕರ ಚಾರಿತ್ರ್ಯವಧೆ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
(ಪ್ರತ್ಯೇಕ ಪ್ರಕರಣ) ಸಿಎಂ ಸಿದ್ದರಾಮಯ್ಯ ಫೋಟೋ ತಿರುಚಿದ್ದ ವ್ಯಕ್ತಿಯ ವಿರುದ್ದ ದೂರು : ಸರ್ಕಾರ ಮಹಿಷಾ ದಸರಾಗೆ ಸಮ್ಮತಿ ಸೂಚಿಸಿದ್ದನ್ನು ವಿರೋಧಿಸುವ ಭರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಫೋಟೋ ತಿರುಚಿ ಫೇಸ್ಬುಕ್ನಲ್ಲಿ ಪ್ರಕಟಿಸಿದ್ದ ವ್ಯಕ್ತಿಯ ವಿರುದ್ಧ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ (ಅಕ್ಟೋಬರ್ 21-23) ಪ್ರಕರಣ ದಾಖಲಾಗಿತ್ತು.