ನಟ ದರ್ಶನ್, ಜಗ್ಗೇಶ್ ಸೇರಿ ಹಲವರ ವಿರುದ್ಧ ದೂರು.. ಬೆಂಗಳೂರು :ಹುಲಿ ಉಗುರು ಧರಿಸಿದ ಆರೋಪದಡಿ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ ಬೆನ್ನಲ್ಲೇ ಸೆಲೆಬ್ರಿಟಿಗಳಿಗೂ ಸಂಕಷ್ಟ ಎದುರಾಗಿದೆ. ನಟ ತೂಗುದೀಪ್ ದರ್ಶನ್, ವಿನಯ್ ಗುರೂಜಿ, ಬಿದನಗೆರೆಯ ಶನೇಶ್ವರ ದೇವಾಲಯದ ಅರ್ಚಕ ಧನಂಜಯ್ ಗುರೂಜಿ ಸೇರಿದಂತೆ ಹಲವರ ವಿರುದ್ಧ ಅರಣ್ಯಾಧಿಕಾರಿಗಳಿಗೆ ದೂರು ನೀಡಲಾಗಿದೆ.
ಸೋಷಿಯಲ್ ಮೀಡಿಯಾಗಳಲ್ಲಿ ಸೆಲೆಬ್ರಿಟಿಗಳ ಫೋಟೋ ವೈರಲ್ ಆಗುತ್ತಿದ್ದಂತೆ ನಟರಾದ ದರ್ಶನ್ ವಿರುದ್ಧ ಸರ್ವ ಸಂಘಟನೆ ಒಕ್ಕೂಟ, ಜನತಾ ಪಕ್ಷ ಸೇರಿದಂತೆ ವಿವಿಧ ಸಂಘಟನೆಗಳು ದೂರು ನೀಡಿವೆ.
ನಟ ಹಾಗೂ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ನಿಖಿಲ್ ಕುಮಾರಸ್ವಾಮಿ ವಿರುದ್ಧ ಹುಲಿ ಉಗುರು ಡಾಲರ್ ಧರಿಸಿದ ಆರೋಪ ಕೇಳಿ ಬರುತ್ತಿದ್ದಂತೆ ಅವರು ಈ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ. ''ನಾನು ಧರಿಸಿದ್ದ ಹುಲಿ ಉಗುರು ಮಾದರಿಯ ಪೆಂಡೆಂಟ್ ಕೃತಕವಾದದ್ದೇ ಹೊರತು ನೈಜವಾದುದ್ದಲ್ಲ. ಅದು ನನ್ನ ಮದುವೆ ಸಮಯದಲ್ಲಿ ಉಡುಗೊರೆ ನೀಡಿದ್ದು. ಅದು ಈಗಲೂ ನನ್ನ ಬಳಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬಹುದು. ದಯಮಾಡಿ ಯಾರೂ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ವಿನಂತಿ ಮಾಡಿಕೊಳ್ಳುತ್ತೇನೆ'' ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹಲವರ ವಿರುದ್ಧ ದೂರು :ಹುಲಿಯ ಉಗುರು ರೀತಿಯ ತಾಯತ ರೂಪದಲ್ಲಿ ಹಾಕಿಕೊಂಡಿರುವ ನಟ ದರ್ಶನ್ ವಿರುದ್ಧ ಜನತಾ ಜನತಾ ಪಕ್ಷ, ಸರ್ವ ಸಂಘಟನೆಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಯವರು ಇಂದು ಮಲ್ಲೇಶ್ವರದಲ್ಲಿರುವ ಅರಣ್ಯಾಧಿಕಾರಿಗಳ ಕಚೇರಿಗೆ ತೆರಳಿ ದೂರು ನೀಡಿದರು.
ದರ್ಶನ್ ಅವರು ತಮ್ಮ ಕೊರಳಿಗೆ ಹುಲಿಯ ಉಗುರು ಹೋಲುವ ತಾಯತ ಹಾಕಿಕೊಂಡಿದ್ದು, ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಹುಲಿ, ಸಿಂಹ, ಜಿಂಕೆ ಮುಂತಾದ ಕಾಡುಪ್ರಾಣಿಗಳನ್ನು ಹತ್ಯೆ ಮಾಡುವುದು ಹಾಗೂ ಅವುಗಳ ಉಗುರು, ಚರ್ಮ, ಕೊಂಬು ಇತ್ಯಾದಿಗಳನ್ನು ಇಟ್ಟುಕೊಳ್ಳುವುದು, ಮಾರಾಟ ಮಾಡುವುದು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ದೂರಿನಲ್ಲಿ ಜನತಾ ಪಕ್ಷದ ರಾಜ್ಯ ಕಾರ್ಯದರ್ಶಿ ನಾಗೇಶ್ ಉಲ್ಲೇಖಿಸಿದ್ದಾರೆ.
ಸರ್ವ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಶಿವಕುಮಾರ್ ಎಂಬುವರು ನಟರಾದ ದರ್ಶನ್, ಜಗ್ಗೇಶ್ ಹಾಗೂ ವಿನಯ್ ಗುರೂಜಿ ಅವರ ವಿರುದ್ಧ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಬೇಕು. ಒಂದು ವೇಳೆ ಹುಲಿಯ ಉಗುರು ಆಗಿದ್ದರೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ರಾಜ್ಯ ಅರಣ್ಯ ಇಲಾಖೆಯ ಅಪರ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಮಾತನಾಡಿದ್ದು, ಹುಲಿ ಉಗುರಿಗೆ ಸಂಬಂಧಿಸಿದಂತೆ ಹಲವು ದೂರುಗಳು ಬಂದಿವೆ. ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚನೆ ಮಾಡುತ್ತೇವೆ. ಚಿಕ್ಕಮಗಳೂರು- ತುಮಕೂರು ಸೇರಿ ಹಲವು ಕಡೆ ಹೆಚ್ಚಿನ ದೂರುಗಳು ಬಂದಿವೆ. ನಟ ಜಗ್ಗೇಶ್ ಮೇಲೆ ದೂರು ಕೊಟ್ಟಿರುವ ಮಾಹಿತಿಯಿದೆ. ನನ್ನ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದೇವೆ. ಕೂಲಂಕಷವಾಗಿ ತನಿಖೆ ಮಾಡಿ ಅಪರಾಧ ಪತ್ತೆ ಹಚ್ಚುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ:ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪ: ಬಿದನಗೆರೆ ಧನಂಜಯ ಗುರೂಜಿ ವಿಚಾರಣೆ