ಬೆಂಗಳೂರು: ಕಟ್ಟಡ ನಿರ್ಮಾಣ ಮಾಡದೆ ಕಾಗದದಲ್ಲಿ ಕಾಮಗಾರಿ ನಡೆಸಿರುವುದಾಗಿ ದಾಖಲಾತಿ ಸೃಷ್ಟಿಸಿ 97 ಕೋಟಿ ರೂಪಾಯಿ ಗುಳುಂ ಮಾಡಿರುವ ಆರೋಪ ನಗರಾಭಿವೃದ್ಧಿ ಸಚಿವ ಹಾಗೂ ಕೆಆರ್ ಪುರ ಶಾಸಕ ಬೈರತಿ ಬಸವರಾಜ್ ವಿರುದ್ಧ ಕೇಳಿಬಂದಿದೆ. ಬೈರತಿ ಬಸವರಾಜ್, ಮಾಜಿ ಕಾರ್ಪೋರೇಟರ್ ಶ್ರೀಕಾಂತ್ ಹಾಗೂ ಮಹದೇವಪುರ ವಲಯ ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ 10 ಮಂದಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಎಲ್ಲವೂ ಕಾಗದಪತ್ರದಲ್ಲೇ ಕಟ್ಟಡ ನಿರ್ಮಾಣ - ಅಬ್ರಾಹಂ:ದೂರು ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಬ್ರಾಹಂ 'ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಹಣ ಮಂಜೂರು ಮಾಡಿಸಿ ಕಾಮಗಾರಿ ನಡೆಸದೆ ಎಲ್ಲವೂ ಕಾಗದಪತ್ರದಲ್ಲೇ ಕಟ್ಟಡ ನಿರ್ಮಾಣ ಮಾಡಿಸಿರುವುದಾಗಿ ದಾಖಲೆ ಸೃಷ್ಟಿಸಿ 97 ಕೋಟಿ ರೂಪಾಯಿ ವಂಚಿಸಿದ್ದಾರೆ. ವಂಚನೆ ಜಾಲದ ಹಿಂದೆ ಪ್ರಮುಖವಾಗಿ ಸಚಿವ ಬೈರತಿ ಬಸವರಾಜ್ ಅವರ ಕೈವಾಡವಿದೆ ಎಂದು ಆರೋಪಿಸಿದರು.
ಇದನ್ನೂ ಓದಿ:ರಾಜ್ಯ ಸರ್ಕಾರ ಕಲ್ಯಾಣ ಮತ್ತು ಅಭಿವೃದ್ಧಿ ನಿಧಿಗಳನ್ನು ಬಳಸಿಕೊಳ್ಳಲು ಮರೆತಿದೆ: ಸುರ್ಜೇವಾಲಾ ಬೇಸರ
ಕಾಮಗಾರಿಗಳಿಗೆ ನಿರ್ಮಾಣ ಮಾಡದೆ ಹಣ ಬಿಡುಗಡೆ - ಟಿ ಜೆ ಅಬ್ರಾಹಂ:ಕೆಆರ್ ಪುರ ಕ್ಷೇತ್ರಕ್ಕೆ ಇದುವರೆಗೂ ಬಿಬಿಎಂಪಿಗೆ ಸಂಬಂಧಿಸಿದಂತೆ 1883 ಕಾಮಗಾರಿಗಳಿಗೆ 488 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ. ಈ ಪೈಕಿ 97 ಕೋಟಿ ರೂಪಾಯಿ ಕಾಮಗಾರಿಗಳಿಗೆ ನಿರ್ಮಾಣ ಮಾಡದೆ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ 373 ಮಂದಿ ಗುತ್ತಿಗೆದಾರರಿದ್ದಾರೆ. 155 ಮಂದಿ ಗುತ್ತಿಗೆದಾರರಿಗೆ ಒಂದು ಗುತ್ತಿಗೆ ನೀಡಿದರೆ 78 ಮಂದಿ ಎರಡು ಗುತ್ತಿಗೆ ಹಾಗೂ 41 ಮಂದಿ ಮೂರು ಕಾಮಗಾರಿಗಳಿಗೆ ಆದೇಶ ಪಡೆದಿದ್ದಾರೆ.