ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಯ ಹೇಳಿಕೆಯನ್ನು ದಾಖಲಿಸುವಾಗ ದೂರುದಾರರು ಹಾಜರಿರುವ ಅನಿವಾರ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಚೆಕ್ ಬೌನ್ಸ್ ಪ್ರಕರಣದಲ್ಲಿ ದೂರುದಾರಾದ ಖುದ್ದು ಹಾಜರಿರದಿದ್ದ ಆರೋಪಿಯನ್ನು ಆರೋಪಮುಕ್ತಗೊಳಿಸಿದ್ದ ವಿಚಾರಣಾ ನ್ಯಾಯಾಲಯ ಆದೇಶ ಪ್ರಶ್ನಿಸಿ ಕಲಬುರಗಿಯ ಸುಭಾಷ್ ಚೌಕದ ನಿವಾಸಿ ನಾಗರಾಜ್ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಇದೇ ವೇಳೆ ರದ್ದುಪಡಿಸಿದೆ. ಜತೆಗೆ, ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿದ್ದು, ದೂರು ರದ್ದುಪಡಿಸಿದ ಹಂತದಿಂದಲೇ ಮತ್ತೆ ವಿಚಾರಣೆ ನಡೆಸಬೇಕು. 2022 ಅ.21ರಂದು ಆರೋಪಿ ಮತ್ತು ದೂರುದಾರರು ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಿ, ಪ್ರಕರಣದ ಶೀಘ್ರ ಇತ್ಯರ್ಥಕ್ಕೆ ಸಹಕರಿಸಬೇಕು ಎಂದು ಸೂಚನೆ ನೀಡಿದೆ.
ಚೆಕ್‌ಬೌನ್ಸ್ ಪ್ರಕರಣದ ವಿಚಾರಣೆಗೆ ದೂರುದಾರರು ಹಾಜರಾಗಿಲ್ಲ ಎಂಬ ಕಾರಣ ಪರಿಗಣಿಸಿ ಆರೋಪಿಯನ್ನು ಖುಲಾಸೆಗೊಳಿಸಲು ಸಾಧ್ಯವಿಲ್ಲ. ಆರೋಪಿ ಹೇಳಿಕೆ ದಾಖಲಿಸಿಕೊಳ್ಳುವಾಗ ದೂರುದಾರರು ಖುದ್ದು ಹಾಜರಿರಬೇಕು ಎಂಬುದು ಅನಿವಾರ್ಯವಲ್ಲ. ಆರೋಪಿಯ ಹೇಳಿಕೆ ದಾಖಲಿಸಿಕೊಳ್ಳುವುದು ನ್ಯಾಯಾಲಯದ ಜವಾಬ್ದಾರಿಯಾಗಿರುತ್ತದೆ ಎಂದು ಅಭಿಪ್ರಾಯಟ್ಟಿದೆ.
ಪ್ರಕರಣದ ಹಿನ್ನೆಲೆ: 2013ರಲ್ಲಿ ಈಶ್ವರ್ ಎಂಬುವರು ನಾಗರಾಜ್ ಅವರಿಂದ 4.5 ಲಕ್ಷ ರೂ. ಸಾಲ ಪಡೆದುಕೊಂಡು ಭದ್ರತಾ ಖಾತರಿಯಾಗಿ ಚೆಕ್ ನೀಡಿದ್ದರು. ಆದರೆ, ಸಾಲ ಮರು ಪಾವತಿಸದ ಹಿನ್ನೆಲೆಯಲ್ಲಿ ಬೌನ್ಸ್ ಪ್ರಕರಣ ಸಂಬಂಧ ನಾಗರಾಜ್ ದೂರು ದಾಖಲಿಸಿದ್ದರು. ವಿಚಾರಣಾ ನ್ಯಾಯಾಲಯದ ಮುಂದೆ ಆರೋಪಿ ಈಶ್ವರ್ ಹಲವು ವರ್ಷ ಹಾಜರಾಗಿರಲಿಲ್ಲ. ಇದರಿಂದ ಆರೋಪಿಗೆ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಲಾಗಿತ್ತು.
ನಂತರ 2018ರಲ್ಲಿ ಆರೋಪಿಯು ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಿ, ಜಾಮೀನು ಸಹ ಪಡೆದುಕೊಂಡಿದ್ದ. ಆರೋಪಿ ಹೇಳಿಕೆ ದಾಖಲೆಗೆ ಪ್ರಕರಣ ನಿಗದಿಯಾದಾಗ ದೂರುದಾರ ಹಾಜರಾಗಿರಲಿಲ್ಲ. ಇದರಿಂದ ವಿಚಾರಣಾ ನ್ಯಾಯಾಲಯದ ಪ್ರಕರಣ ವಜಾಗೊಳಿಸಿತ್ತು. ಆ ಆದೇಶ ಪ್ರಶ್ನಿಸಿ ದೂರುದಾರ ನಾಗರಾಜ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ :ಡಿ ನೋಟಿಫಿಕೇಷನ್: ಸುಳ್ಳು ಮಾಹಿತಿ ಬಿಡುಗಡೆ ಮಾಡಿದವರ ವಿರುದ್ಧ ಕೇಸ್ ದಾಖಲಿಸಲು ಸಿದ್ದರಾಮಯ್ಯ ಆಗ್ರಹ