ಬೆಂಗಳೂರು:ವಿಧಾನ ಪರಿಷತ್ ಸಭಾಪತಿ ಹುದ್ದೆಗೆ ಅಭ್ಯರ್ಥಿ ಆಯ್ಕೆ ಮಾಡುವ ಸಂಬಂಧ ಬಿಜೆಪಿ ನಾಯಕರಲ್ಲಿಯೇ ಜಟಾಪಟಿ ಏರ್ಪಟ್ಟಿದೆ. ಜೆಡಿಎಸ್ ತೊರೆದು ಬಿಜೆಪಿ ಸೇರಿದ ಹಿರಿಯ ನಾಯಕ ಬಸವರಾಜ ಹೊರಟ್ಟಿ ಆಯ್ಕೆ ಮಾಡುವ ಬಗ್ಗೆ ಪಕ್ಷದಲ್ಲಿ ತೀವ್ರ ಗೊಂದಲ ಉಂಟಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಇತರ ನಾಯಕರು ಸಭಾಪತಿ ಅಭ್ಯರ್ಥಿ ಸ್ಥಾನಕ್ಕೆ ಬಸವರಾಜ ಹೊರಟ್ಟಿಯವರ ಆಯ್ಕೆ ಮಾಡುವ ಪರವಾಗಿದ್ದರೆ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಹೊರಟ್ಟಿ ಆಯ್ಕೆಗೆ ಅಪಸ್ವರ ಎತ್ತಿದ್ದಾರೆ ಎನ್ನಲಾಗಿದೆ.
ಚುನಾವಣೆ ಮುಂದೂಡುವಂತೆ ಒತ್ತಡ?:ಸಚಿವ ಸಂಪುಟ ಸಭೆಯಲ್ಲಿ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಇದೇ 21ರಂದು(ನಾಳೆ) ಚುನಾವಣೆ ನಡೆಸಲು ತೀರ್ಮಾನವಾಗಿದ್ದರೂ, ಈ ಕ್ಷಣದವರೆಗೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಲಾಗಿಲ್ಲ ಮತ್ತು ಚುನಾವಣೆ ನಡೆಸುವ ಬಗ್ಗೆ ರಾಜ್ಯ ಪಾಲರ ಕಚೇರಿಗೆ ವರದಿ ಸಹ ನೀಡಿಲ್ಲ. ಹೊರಟ್ಟಿಯವರ ಆಯ್ಕೆ ಬಗ್ಗೆ ಗೊಂದಲ ಮೂಡಿದ್ದರಿಂದ ಸಭಾಪತಿ ಚುನಾವಣೆಯನ್ನು ನಾಳೆ ನಡೆಸದೆ ಮುಂದೂಡುವ ಬಗ್ಗೆಯೂ ಮುಖ್ಯಮಂತ್ರಿ ಬೊಮ್ಮಾಯಿ ಮೇಲೆ ಬಿಜೆಪಿ ಹೈಕಮಾಂಡ್ ಒತ್ತಡ ಹಾಕತೊಡಗಿದೆ ಎಂದು ತಿಳಿದು ಬಂದಿದೆ.
ಬಸವರಾಜ ಹೊರಟ್ಟಿಯವರನ್ನು ಸಭಾಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲು ಬಿಜಜೆಪಿಯಲ್ಲಿ ಕೆಲವು ಸಭಾಪತಿ ಸ್ಥಾನದ ಆಕಾಂಕ್ಷಿಗಳು ವಿರೋಧ ವ್ಯಕ್ತಪಡಿಸಿ ಬಿಜೆಪಿ ಹೈಕಮಾಂಡ್ ಮತ್ತು ಆರ್ಎಸ್ಎಸ್ಗೆ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ. ಆರ್ಎಸ್ಎಸ್ ಮತ್ತು ಬಿಜೆಪಿ ಹೈಕಮಾಂಡ್ ಸದಸ್ಯರಲ್ಲಿ ಒಬ್ಬರಾದ ಬಿ.ಎಲ್ ಸಂತೋಷ್ ಅವರ ಮಧ್ಯಪ್ರವೆಶದಿಂದ ಸಭಾಪತಿ ಅಭ್ಯರ್ಥಿ ಆಯ್ಕೆ ಜಟಿಲಗೊಂಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೈಕಮಾಂಡ್ ಒಪ್ಪಿಗೆ ಪಡೆದು ಜೆಡಿಎಸ್ನಲ್ಲಿದ್ದ ಬಸವರಾಜ ಹೊರಟ್ಟಿಯವರನ್ನು ಬಿಜೆಪಿಗೆ ಕರೆತರುವಾಗ ಚುನಾವಣೆಯಲ್ಲಿ ಗೆದ್ದರೆ ವಿಧಾನಪರಿಷತ್ ಸಭಾಪತಿಯಾಗಿ ಆಯ್ಕೆ ಮಾಡುವ ಭರವಸೆ ನೀಡಿದ್ದರು ಎನ್ನಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಹೊರಟ್ಟಿಯವರಿಗೆ ಸಭಾಪತಿ ಸ್ಥಾನ ನೀಡಲು ಸಹಮತ ಸೂಚಿಸಿದ್ದಾರೆ ಎನ್ನಲಾಗಿದೆ.
ಆದರೆ ಮೇಲ್ಮನೆ ಸಭಾಪತಿಯಾಗಿ ನೇಮಕ ಮಾಡುವ ಷರತ್ತಿನ ಮೇರೆಗೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ ಬಸವರಾಜ ಹೊರಟ್ಟಿಗೆ ನೀಡಿದ್ದ ಮಾತನ್ನು ತಪ್ಪುವ, ಬಿಜೆಪಿ ವಚನ ಭ್ರಷ್ಟ ಪಕ್ಷವೆನಿಸುವ ಎಲ್ಲ ಲಕ್ಷಣಗಳು ಗೋಚರಿಸತೊಡಗಿವೆ.
ಈಡೇರದ ನೀಡಿದ ಭರವಸೆ: ಆಪರೇಷನ್ ಕಮಲ ಮಾಡಿ ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಪಕ್ಷಕ್ಕೆ ಸೇರಿಸಿಕೊಂಡ ಹಲವರಿಗೆ ಮಾತು ಕೊಟ್ಟಂತೆ ಸೂಕ್ತ ಸ್ಥಾನ ಮಾನ ಕಲ್ಪಿಸುವುದರಲ್ಲಿ ಬಿಜೆಪಿ ಹಿಂದೆ ಬೀಳತೊಡಗಿದೆ. ವಲಸಿಗರಲ್ಲಿ ಕೆಲವರಿಗೆ ಪಕ್ಷ ಸೇರುವಾಗ ನೀಡಿದ ಆಶ್ವಾಸನೆಯನ್ನು ಈಡೇರಿಸಿಲ್ಲ ಎನ್ನುವ ಆಪಾದನೆಗಳಿವೆ.