ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಸ್ಥಾನಕ್ಕೆ ನೀಡಿದ ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಇದೇ ಸಂದರ್ಭದಲ್ಲಿಯೇ ಹಲವು ರಾಜ್ಯದ ರಾಜ್ಯಾಧ್ಯಕ್ಷರಲ್ಲಿಯೂ ಸ್ಥಾನ ಕಳೆದುಕೊಳ್ಳುವ ಆತಂಕ ಆರಂಭವಾಗಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಬದಲಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಕೆಲವರು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಇದ್ದು, ನಿನ್ನೆ ಬೆಳಗ್ಗೆ ನಡೆದ ಲೋಕಸಭೆ ಚುನಾವಣೆ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳ ಹಾಗೂ ಸಂಜೆ ನಡೆದ ಹಿರಿಯ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಕೂಡ ಈ ವಿಚಾರ ಪ್ರಸ್ತಾಪವಾಗಿದೆ. ರಾಷ್ಟ್ರೀಯ ಅಧ್ಯಕ್ಷರೇ ಪದತ್ಯಾಗ ಮಾಡುತ್ತಿರುವಾಗ ರಾಜ್ಯಾಧ್ಯಕ್ಷರೂ ನೈತಿಕವಾಗಿ ಕೆಳಗಿಳಿಯುವ ನಿರ್ಧಾರ ಕೈಗೊಳ್ಳಬೇಕು. ಒಂದೊಮ್ಮೆ ರಾಹುಲ್ ತಮ್ಮ ಸ್ಥಾನದಲ್ಲಿ ಮುಂದುವರಿಯುವ ನಿರ್ಧಾರ ಮಾಡಿದರೂ, ಕೆಲ ರಾಜ್ಯದಲ್ಲಿ ಬದಲಾವಣೆ ಆಗಲೇಬೇಕು. ಅದು ಕರ್ನಾಟಕದಲ್ಲಿ ಕೂಡ ಅನಿವಾರ್ಯ ಎಂಬ ಮಾತು ಕೇಳಿಬಂದಿದೆ.
ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದವರು ಕಾಂಗ್ರೆಸ್ ಕೈ ಹಿಡಿದಿಲ್ಲ. ಸಂಪೂರ್ಣ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಹೀಗಿರುವಾಗ ನಮ್ಮ ಕಡೆ ಇದ್ದ ಒಂದಿಷ್ಟು ಲಿಂಗಾಯಿತ ಸಮುದಾಯದವರು ಕೂಡ ಈಗೀಗ ಬಿಜೆಪಿಯತ್ತ ವಾಲಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ಶೇ.25ರಷ್ಟು ಬೆಂಬಲ ಸಿಕ್ಕಿತ್ತು. ಲೋಕಸಭೆ ಚುನಾವಣೆ ಹೊತ್ತಿಗೆ ಶೇ.5ರಷ್ಟು ಲಿಂಗಾಯಿತರೂ ಕಾಂಗ್ರೆಸ್ಗೆ ಮತ ಹಾಕಿಲ್ಲ. ಇದರಿಂದ ಅವರನ್ನು ನಮ್ಮತ್ತ ಸೆಳೆಯಲು ಪ್ರಬಲ ಲಿಂಗಾಯಿತ ನಾಯಕರಿಗೆ ಅವಕಾಶ ಕೊಡಬೇಕೆಂಬ ಕೂಗು ಕೇಳಿಬಂದಿದೆ.
ಪ್ರಬಲ ಹೆಸರು ಕಾರ್ಯಾಧ್ಯಕ್ಷರದ್ದು:
ಅಂದಹಾಗೆ ಕೆಪಿಸಿಸಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಿಂಗಾಯಿತ ಸಮುದಾಯದವರಲ್ಲಿ ಪ್ರಬಲವಾಗಿ ನಿನ್ನೆ ಕೇಳಿಬಂದ ಹೆಸರು ಎರಡು. ಒಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಇನ್ನೊಂದು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ. ಆದರೆ, ವಯಸ್ಸಿನ ಕಾರಣಕೊಟ್ಟು ಲೋಕಸಭೆ ಚುನಾವಣೆ ಸ್ಪರ್ಧೆಯಿಂದ ಹಿಂದೇಟು ಹಾಕಿದ್ದ ಶಾಮನೂರು ಅವರಿಗಿಂತ ಈಶ್ವರ್ ಖಂಡ್ರೆ ಉತ್ತಮ ಎಂಬ ಅಭಿಪ್ರಾಯ ಎರಡೂ ಸಭೆಯಲ್ಲಿ ವ್ಯಕ್ತವಾಗಿದೆ ಎನ್ನಲಾಗಿದೆ. ಈ ವಿಚಾರವಾಗಿ ಹೈಕಮಾಂಡ್ ಮೇಲೆ ಒತ್ತಡ ತರಲು ಹಿರಿಯರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಚಿಂತನೆ ಶೀಘ್ರದಲ್ಲಿಯೇ ದೆಹಲಿಗೆ ತೆರಳಲು ಹಿರಿಯರು ಚಿಂತನೆ ನಡೆಸಿದ್ದು, ಆದರೆ ಇದು ಅಷ್ಟು ಸುಲಭವಾಗಿ ಖಂಡ್ರೆಗೆ ದಕ್ಕುವ ಸಾಧ್ಯತೆ ಇಲ್ಲ. ಏಕೆಂದರೆ ಅಧ್ಯಕ್ಷ ಸ್ಥಾನದ ಮೇಲೆ ನಾಲ್ವರು ಕಣ್ಣಿಟ್ಟಿದ್ದು, ಇವರಲ್ಲಿ 2023ರ ಮುಖ್ಯಮಂತ್ರಿ ಅಭ್ಯರ್ತಿಯಾಗಲು ಶತಪ್ರಯತ್ನ ನಡೆಸಿರುವ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಪ್ರಮುಖವಾಗಿದ್ದಾರೆ. ಇವರಲ್ಲದೇ ಲಿಂಗಾಯಿತ ಸಮುದಾಯದ ನಾಯಕರು ಹಾಗೂ ಗೃಹ ಸಚಿವರಾಗಿರುವ ಎಂ.ಬಿ. ಪಾಟೀಲ್ ರೇಸ್ನಲ್ಲಿದ್ದಾರೆ. ಇವರ ಬೆನ್ನಲ್ಲೇ ಇತ್ತೀಚೆಗೆ ಪಕ್ಷದ ನಾಯಕರ ವಿರುದ್ಧವೇ ಜಿಂದಾಲ್ ವಿಚಾರವಾಗಿ ತಗಾದೆ ತೆಗೆದಿರುವ ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಇದ್ದಾರೆ. ಇವರ ಜತೆ ಖಂಡ್ರೆ ಇನ್ನೊಬ್ಬ ಆಕಾಂಕ್ಷಿಯಾಗಿ ಅಖಾಡದಲ್ಲಿದ್ದಾರೆ.
ದೆಹಲಿಗೆ ಹೋಗಿ ಬಂದಿರುವ ಹೆಚ್.ಕೆ. ಪಾಟೀಲ್:
ಮಧ್ಯಂತರ ಚುನಾವಣೆ ಎದುರಾಗಬಹುದೆಂಬ ಹಿನ್ನೆಲೆ ಚುನಾವಣೆಯಲ್ಲಿ ಪಕ್ಷ ಮುನ್ನಡೆಸೋಕೆ ನಾಲ್ವರ ಆಸಕ್ತಿ ತೋರಿಸುತ್ತಿರುವ ಬೆನ್ನಲ್ಲೇ ಮಾಜಿ ಸಚಿವ ಹೆಚ್.ಕೆ. ಪಾಟೀಲ್ ದಿಲ್ಲಿಗೆ ಒಂದು ಸುತ್ತು ದಂಡಯಾತ್ರೆ ಮಾಡಿ ಬಂದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅಣತಿಯಂತೆ ಹೈಕಮಾಂಡ್ನಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ಗೆ ಸೂಕ್ಷ್ಮ ಸಂದೇಶ ರವಾನೆಯಾಗಿದೆ. ಪಕ್ಷದ ಅಧ್ಯಕ್ಷ ಸ್ಥಾನವನ್ನು ಯಾವುದೇ ಸಂದರ್ಭದಲ್ಲಿ ತ್ಯಾಗ ಮಾಡಲು ಸಿದ್ಧವಿರುವಂತೆ ಸೂಚಿಸಲಾಗಿದೆ.
ಹತ್ತಿರದಲ್ಲಿದೆ ವರ್ಷ:
ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿ ಬರುವ ಜು.11 ಕ್ಕೆ ಒಂದು ವರ್ಷ ಆಗಲಿದೆ. ಇದರ ಸಂಭ್ರಮ ಕೂಡ ಅವರ ಕಣ್ಣಲ್ಲಿ ಇಲ್ಲ. ಜುಲೈ 14 ರಂದು ಅದ್ಧೂರಿ ಸಂಭ್ರಮಾಚರಣೆಗೆ ಸಿದ್ಧತೆ ಕೂಡ ಮಾಡಿಕೊಳ್ಳಲಾಗುತ್ತಿದೆ. ಅರಮನೆ ಮೈದಾನದಲ್ಲಿ ವರ್ಷಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆ ಈ ಬಗ್ಗೆ ಯಾವುದೇ ಸ್ಪಷ್ಟತೆಯನ್ನು ದಿನೇಶ್ ಗುಂಡೂರಾವ್ ಕೂಡ ನೀಡುತ್ತಿಲ್ಲ.
ಒಟ್ಟಾರೆ ಇಷ್ಟು ದಿನ ಸಿದ್ದರಾಮಯ್ಯರ ಕೃಪೆಯಿಂದ ದಿನೇಶ್ ಗುಂಡೂರಾವ್ ಸುರಕ್ಷಿತವಾಗಿದ್ದರು. ಆದರೆ, ಈಗ ಆ ಆಧಾರವೂ ರಕ್ಷಣೆಗೆ ನಿಂತಿಲ್ಲ. 10 ಸ್ಥಾನದಿಂದ 1ಕ್ಕೆ ಕುಸಿದಿರುವ ಕಾಂಗ್ರೆಸ್ಗೆ ಮುಂದಿನ ಸಾರಥ್ಯ ವಹಿಸಿಕೊಂಡು ಯಾರು ಮುನ್ನಡೆಸುತ್ತಾರೆ ಎನ್ನುವ ಕುತೂಹಲ ಮೂಡಿದ್ದು, ಕಡೆಯ ಕ್ಷಣದಲ್ಲಿ ಆಗಿರುವ ಹಿನ್ನಡೆಗೆ ಇನ್ನಷ್ಟು ಬದಲಾವಣೆ ಬೇಡ ಅಂತ ದಿನೇಶ್ ಅವರನ್ನೇ ಪಕ್ಷ ಮುಂದುವರಿಸಿದರೂ ಅಚ್ಚರಿಯಿಲ್ಲ. ಸದ್ಯ ಬದಲಾವಣೆ ಮಾತು ಮಾತ್ರ ಬಲವಾಗಿ ಕೇಳಿಬರುತ್ತಿದೆ. ನಾಲ್ವರು ನಾಯಕರು ಪಟ್ಟಕ್ಕೇರಲು ಸಿದ್ಧತೆ ಕೂಡ ನಡೆಸಿಕೊಂಡಿದ್ದಾರೆ.