ಕರ್ನಾಟಕ

karnataka

ETV Bharat / state

ಆಕ್ಸಿಜನ್ ಸಿಗದೇ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ಅತ್ಯಲ್ಪ ಎಂದ ಹೈಕೋರ್ಟ್

ಮಧ್ಯಂತರ ಪರಿಹಾರಕ್ಕೆ ಕನಿಷ್ಠ ಮಾನದಂಡ ಇರಬೇಕಾಗುತ್ತದೆ. ಮೋಟಾರು ವಾಹನ ಕಾಯಿದೆ ಪ್ರಕರಣಗಳಲ್ಲಿ ನಿಗದಿ ಮಾಡಿದಂತೆ ಕನಿಷ್ಠ ಮೊತ್ತವಾದರೂ ಇರಬೇಕು. ಈಗ ನೀಡಿರುವ ಪರಿಹಾರ ಮೊತ್ತ ಏನೇನೂ ಅಲ್ಲ, ಅದರ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು ಎಂದು ಹೈಕೋರ್ಟ್ ಹೇಳಿದೆ.

compensation for chamarajanagar tragendy is less says high court
compensation for chamarajanagar tragendy is less says high court

By

Published : May 27, 2021, 8:37 PM IST

ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೇ ಮೃತಪಟ್ಟ 24 ಕೋವಿಡ್ ಸೋಂಕಿತರ ಕುಟುಂಬಗಳಿಗೆ ನೀಡಿರುವ ತಲಾ 2 ಲಕ್ಷ ರೂಪಾಯಿ ಪರಿಹಾರ ಅತ್ಯಂತ ಕಡಿಮೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಚಾಮರಾಜನಗರ ದುರಂತದಲ್ಲಿ ಸಾವನ್ನಪ್ಪಿದ ಮೃತರ ಕುಟುಂಬಗಳಿಗೆ ನೀಡಿರುವ ಪರಿಹಾರ ಸೂಕ್ತವಾಗಿಲ್ಲ. ಮಧ್ಯಂತರ ಪರಿಹಾರಕ್ಕೆ ಕನಿಷ್ಠ ಮಾನದಂಡವಿರಬೇಕಾಗುತ್ತದೆ. ಮೋಟಾರು ವಾಹನ ಕಾಯಿದೆ ಪ್ರಕರಣಗಳಲ್ಲಿ ನಿಗದಿ ಮಾಡಿದಂತೆ ಕನಿಷ್ಠ ಮೊತ್ತವಾದರೂ ಇರಬೇಕು. ಈಗ ನೀಡಿರುವ ಪರಿಹಾರ ಮೊತ್ತ ಏನೇನೂ ಅಲ್ಲ, ಅದರ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು ಎಂದಿತು.

ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಇದು ಮಧ್ಯಂತರ ಪರಿಹಾರವಷ್ಟೇ, ನ್ಯಾಯಾಂಗ ಆಯೋಗದ ವರದಿ ಬಂದ ನಂತರ ಪರಿಹಾರ ಮೊತ್ತ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸರ್ಕಾರ ನ್ಯಾಯಾಂಗ ತನಿಖೆಯ ವರದಿ ಬಂದಿಲ್ಲವೆಂದು ಸಮರ್ಥಿಸಿಕೊಳ್ಳಬಹುದು, ಆದರೂ ನೀಡಿರುವ ಪರಿಹಾರದ ಮೊತ್ತ ಅತ್ಯಲ್ಪ, ಹೀಗಾಗಿ, ಮುಂದಿನ ವಿಚಾರಣೆ ವೇಳೆ ಮಧ್ಯಂತರ ಪರಿಹಾರ ಮೊತ್ತ ಹೆಚ್ಚಳ ಮಾಡುವ ಬಗ್ಗೆ ಹಾಗೂ ಆಕ್ಸಿಜನ್ ಸಿಗದೇ ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬ ವಿಚಾರಗಳ ಕುರಿತು ವಿಚಾರಣೆ ನಡೆಸಲಾಗುವುದು. ಈ ಬಗ್ಗೆ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ತಿಳಿಸಿ, ಜೂನ್ 3ಕ್ಕೆ ವಿಚಾರಣೆ ಮುಂದೂಡಿತು.

ಮತೃರ ಕುಟುಂಬಗಳಿಗೆ ಪರಿಹಾರ ಕೋರಿ ಪಿಐಎಲ್ ಸಲ್ಲಿಸಿರುವ ಚಾಮರಾಜನಗರದವರೇ ಆದ ವಕೀಲ ಕೆ.ಎಂ. ಶ್ರೀನಿವಾಸಮೂರ್ತಿ ಪೀಠಕ್ಕೆ ಮನವಿ ಮಾಡಿ, ಮೃತಪಟ್ಟವರೆಲ್ಲಾ 30ರಿಂದ 40 ವರ್ಷ ಅಸುಪಾಸಿನವರು, ಅವರಲ್ಲಿ ಬಹುತೇಕ ಮಂದಿ ತೀರಾ ಬಡವರು. ಹಾಗಾಗಿ ಪರಿಹಾರದ ಜೊತೆಗೆ ಮೃತರ ಕುಟುಂಬಕ್ಕೆ ಸರ್ಕಾರದಿಂದ ಉದ್ಯೋಗ ನೀಡಲು ಆದೇಶಿಸಬೇಕು ಎಂದು ಕೋರಿದರು.

ಕೋರಿಕೆ ಆಲಿಸಿದ ಪೀಠ ಈ ಬಗ್ಗೆ ಮುಂದಿನ ವಿಚಾರಣೆ ವೇಳೆ ಗಮನ ಹರಿಸುವುದಾಗಿ ತಿಳಿಸಿತು.

ABOUT THE AUTHOR

...view details