ಬೆಂಗಳೂರು: ಅಪಘಾತದಲ್ಲಿ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಉಂಟಾದ ನಷ್ಟ ಪ್ರಮಾಣವನ್ನು ಸರಿದೂಗಿಸುವ ಬಾಧ್ಯತೆ ಮೋಟಾರು ವಾಹನಗಳ ಅಪಘಾತ ಪರಿಹಾರ ನ್ಯಾಯಾಧಿಕರಣದ ಮೇಲಿರಲಿದೆ ಎಂದು ಹೈಕೋರ್ಟ್ ಆದೇಶಿಸಿದೆ. ಆದರೆ, ಪರಿಹಾರಕ್ಕೆ ಅರ್ಹರಿರುವ ವ್ಯಕ್ತಿ ಅದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಒದಗಿಸಬೇಕಾಗಿರುವುದು ಕೂಡ ಅತ್ಯಗತ್ಯ ಎಂದು ಪೀಠ ತಿಳಿಸಿದೆ.
ನ್ಯಾಯಾಧಿಕರಣ ಆದೇಶಿಸಿದ್ದ ಮೊತ್ತಕ್ಕಿಂತಲೂ ಹೆಚ್ಚು ಮೊತ್ತ ದುರಸ್ತಿಗೆ ವೆಚ್ಚವಾಗಿದ್ದು, ಈ ಮೊತ್ತ ಪಾವತಿಸಲು ವಿಮಾ ಕಂಪೆನಿಗೆ ನಿರ್ದೇಶನ ನೀಡಲು ಕೋರಿ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ್ದ ನ್ಯಾಯಧಿಕರಣದ ಕ್ರಮ ಪ್ರಶ್ನಿಸಿ, ಬೆಂಗಳೂರು ನಿವಾಸಿ ಟ್ಯಾಕ್ಸಿ ಚಾಲಕ ಹೇಮಂತ್ ರಾಜು ಎಂಬುವರು ಮೇಲ್ಮನವಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಿಲ್ಲಾಕೂರು ಸುಮಲತಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಮೇಲ್ಮನವಿದಾರರ ಕಾರು ಅಪಘಾತ ಸಂಬಂಧ ವಿಮಾ ಕಂಪೆನಿ 77,051 ಸಾವಿರ ರೂ. ಪಾವತಿ ಮಾಡಿದೆ. ಆದರೆ, ವಾಹನ ದುರಸ್ತಿಗಾಗಿ 1,10,375 ರೂ. ಖರ್ಚಾಗಿದೆ ಎಂದು ದಾಖಲೆಗಳಿಂದ ತಿಳಿದು ಬಂದಿದೆ. ಅಲ್ಲದೆ, ಹೆಚ್ಚುವರಿಯಾಗಿ 33,324 ರೂ. ಪಾವತಿಸಿರುವುದಕ್ಕೆ ಸಾಕ್ಷ್ಯಾಧಾರಗಳಿವೆ. ಆದ್ದರಿಂದ ನಷ್ಟದ ಮೊತ್ತವನ್ನೂ ಸಂಕಷ್ಟಕ್ಕೆ ಸಿಲುಕಿದವರೇ ಭರಿಸುವುದಕ್ಕೆ ಅವಕಾಶವಿರುವುದಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಧಿಕರಣ ಈ ಹಿಂದೆ ನೀಡಿದ್ದ ಆದೇಶದಂತೆ 77,051 ಸಾವಿರ ರೂ.ನೊಂದಿಗೆ ಹೆಚ್ಚುವರಿಯಾಗಿ 53,324 ರೂ. ಅನ್ನು ಶೇ.6ರ ಬಡ್ಡಿದರಲ್ಲಿ ಪಾವತಿ ಮಾಡಬೇಕು. ಜೊತೆಗೆ, ಜಖಂಗೊಂಡಿದ್ದ ಕಾರು ದುರಸ್ತಿ ಮಾಡಿಸಲು ಎರಡು ತಿಂಗಳ ಅವಧಿಗೆ ಉಂಟಾದ ನಷ್ಟಕ್ಕೆ ಪರಿಹಾರವನ್ನಾಗಿ 20 ಸಾವಿರ ರೂ. ನೀಡಲು ಪ್ರತಿವಾದಿ ಫ್ಯೂಚರ್ ಜನರಲ್ ಇನ್ಶೂರೆನ್ಸ್ ಮತ್ತು ಹೆಚ್.ಜೆ ಪುನೀತಾ ಎಂಬುವರಿಗೆ ನಿರ್ದೇಶಿಸಿದೆ.
ತಪ್ಪಿತಸ್ಥ ವಾಹನದ ವಿಮಾದಾರ ಹಾನಿಗೊಳಗಾದ ವಾಹನದ ದುರಸ್ತಿಗೆ ವೆಚ್ಚವಾದ ಒಟ್ಟು ಮೊತ್ತ ಪಾವತಿ ಮಾಡದಿದ್ದಲ್ಲಿ, ಸಂಪೂರ್ಣ ಮೊತ್ತ ಪಾವತಿಸಲು ನಿರ್ದೇಶನ ನೀಡುವಂತೆ ಕೋರಿ ನ್ಯಾಯಮಂಡಳಿಯಲ್ಲಿ ಮನವಿ ಸಲ್ಲಿಸಲು ಹಾನಿಗೊಳಗಾದ ವಾಹನದ ವ್ಯಕ್ತಿ ಸಂಪೂರ್ಣ ಅಧಿಕಾರ ಹೊಂದಿರುತ್ತಾನೆ ಎಂದು ಪೀಠ ತಿಳಿಸಿದೆ.