ಬೆಂಗಳೂರು: ಪಿಎಫ್ ಹಣ ನೀಡಲು ವಿಳಂಬ ತೋರಿದ ಆರೋಪ ಹಿನ್ನೆಲೆ ಕಂಪನಿ ಮಾಲೀಕನಿಗೆ ಮಾಜಿ ಉದ್ಯೋಗಿ ಅಸಭ್ಯವಾಗಿ ನಿಂದಿಸಿದ್ದಾನೆ. ಸಾಲದೆಂಬಂತೆ ಮಾಲೀಕ ಹಾಗೂ ಆತನ ಪತ್ನಿಯ ಮೊಬೈಲ್ ನಂಬರ್ಗಳನ್ನು ಡೇಟಿಂಗ್ ಜಾಲತಾಣಗಳಿಗೆ ಹಾಕಿ ಅವರ ಗೌರವಕ್ಕೆ ಚ್ಯುತಿ ತಂದಿರುವ ಆರೋಪದಡಿ ನಗರ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಕಲ್ಮನೆ ಟ್ರೇಡಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಹರಿಪ್ರಸಾದ್ ಜೋಷಿ ವಿರುದ್ಧ ದೂರು ದಾಖಲಾಗಿದೆ. ಇವರು ಕೆಲ ತಿಂಗಳ ಹಿಂದೆ ಕೆಲಸ ತೊರೆದಿದ್ದರು. ಬಳಿಕ ಭವಿಷ್ಯನಿಧಿ (ಪಿಎಫ್) ಅರ್ಜಿ ಸಲ್ಲಿಸಿದ್ದರು. ಆದರೆ ಕೊರೊನಾ ಹಿನ್ನೆಲೆ ಕಂಪನಿಯ ಅಡಳಿತಾತ್ಮಕ ಕೆಲಸ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರಿಂದ ಪಿಎಫ್ ಅರ್ಜಿ ಪ್ರಕ್ರಿಯೆ ವಿಳಂಬವಾಗಿದೆ.
ಈ ಸಂಬಂಧ ಕಂಪನಿ ಮಾಲೀಕರು ಕೊರೊನಾ ಬಿಕ್ಕಟ್ಟು ಮುಗಿದ ಬಳಿ ಪಿಎಫ್ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೂ ಅವರ ಮಾತನ್ನು ಕೇಳದೇ ಜೋಶಿ, ಕೆಲದಿನಗಳ ಬಳಿಕ ಮಾಲೀಕ, ಅವರ ಹೆಂಡತಿ ಹಾಗೂ ಮಕ್ಕಳನ್ನು ನಿಂದಿಸುವ ಹಾಗೇ ಈಮೇಲ್ ಸಂದೇಶ ಕಳುಹಿಸಿದ್ದರು.
ಅದೇ ರೀತಿ ಮಾಲೀಕ ಹಾಗೂ ಆತನ ಪತ್ನಿಯ ಮೊಬೈಲ್ ನಂಬರ್ಗಳನ್ನು ಲೊಕ್ಯಾಂಟೊ ಸೇರಿದಂತೆ ಇನ್ನಿತರ ಡೇಟಿಂಗ್ ಜಾಲತಾಣಗಳಲ್ಲಿ ಹಾಕಿದ್ದನು. ಪೋರ್ನ್ ಗ್ರಾಫಿಕ್ ವಸ್ತುಗಳನ್ನು ಮಾಲೀಕನ ಹೆಸರಿನಲ್ಲಿ ಆರ್ಡರ್ ಮಾಡಿ ಅವರ ಗೌರವಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾನೆ ಎಂದು ದೂರಿ ಕಂಪನಿ ಮಾಲೀಕ, ಆರೋಪಿ ವಿರುದ್ಧ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
ದೂರಿನನ್ವಯ ಐಟಿ ಕಾಯ್ದೆ , ಐಪಿಸಿ 419 (ಕಂಪನಿ ಅಥವಾ ವ್ಯಕ್ತಿಯ ಘನತೆಗೆ ಧಕ್ಕೆ) 509 (ಮಹಿಳಾ ಗೌರವಕ್ಕೆ ಕುಂದು) ಅಡಿ ಸೆಕ್ಷನ್ ದಾಖಲಿಸಿಕೊಂಡು ಆರೋಪಿ ಪತ್ತೆಗಾಗಿ ಪೊಲೀಸರು ಮುಂದಾಗಿದ್ದಾರೆ.