ಬೆಂಗಳೂರು: ಸದನದಲ್ಲಿ ಶರ್ಟ್ ಕಳಚಿ ಪ್ರತಿಭಟನೆ ನಡೆಸಿದ ಘಟನೆಗೆ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ವಿಷಾದ ವ್ಯಕ್ತಪಡಿಸಿದ್ದು ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಹಕ್ಕುಬಾಧ್ಯತೆಗಳ ಸಮಿತಿ ಶಿಫಾರಸು ಮಾಡಿದೆ.
ಹಕ್ಕು ಬಾಧ್ಯತೆಗಳ ಸಮಿತಿ ಅಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇಂದು ವಿಧಾನಸಭೆಯಲ್ಲಿ ವರದಿ ಮಂಡಿಸಿದರು. 2021ರ ಮಾರ್ಚ್ 4 ರಂದು ವಿಧಾನಸಭೆಯಲ್ಲಿ 'ಒಂದು ರಾಷ್ಟ್ರ ಒಂದು ಚುನಾವಣೆ' ಕುರಿತು ವಿಶೇಷ ಚರ್ಚೆ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಸ್ತಾವಿಕ ಭಾಷಣವನ್ನು ಮಾಡಿದ ವೇಳೆ ಅದನ್ನು ವಿರೋಧಿಸಿ ಬಿ.ಕೆ.ಸಂಗಮೇಶ್ ಅವರು ಶರ್ಟ್ ಕಳಚಿ ಪ್ರತಿಭಟನೆ ನಡೆಸಿದ್ದರು. ಇದನ್ನು ಅಶಿಸ್ತಿನಿಂದ, ಬೇಜವಾಬ್ದಾರಿಯಿಂದ ನಡೆದುಕೊಳ್ಳುವ ಈ ರೀತಿಯ ವರ್ತನೆ ಇಡೀ ಸದನಕ್ಕೆ ಗೌರವ ತರುವಂಹದ್ದಲ್ಲ ಎಂದು ಸ್ಪೀಕರ್ ಬೇಸರ ವ್ಯಕ್ತಪಡಿಸಿದ್ದರು.