ಬೆಂಗಳೂರು:ಪಾರಂಪರಿಕ ಕಟ್ಟಡಗಳ ರಕ್ಷಣೆಗಾಗಿ ರಾಜ್ಯಾದ್ಯಂತ ಪ್ರತಿ ಜಿಲ್ಲಾ ಮಟ್ಟದಲ್ಲೂ ಪಾರಂಪರಿಕ ಸಂರಕ್ಷಣಾ ಸಮಿತಿ ರಚಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮೈಸೂರಿನ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ ಡೌನ್ ಕಟ್ಟಡಗಳನ್ನು ತೆರವುಗೊಳಿಸುವ ಕ್ರಮ ಪ್ರಶ್ನಿಸಿ ಪ್ರೊ. ಡಿ. ಶ್ರೀಜಯದೇವರಾಜ ಅರಸ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠ, 'ವಲಯ ನಿರ್ಬಂಧ ತಿದ್ದುಪಡಿ ಕಾಯ್ದೆ-2020'ರ ಪ್ರಕಾರ ಯಾವುದೇ ಪಾರಂಪರಿಕ ಕಟ್ಟಡಗಳನ್ನು ತೆರವು ಮಾಡುವ ಮುನ್ನ ಪಾರಂಪರಿಕ ಸಮಿತಿಗಳು ಆ ಬಗ್ಗೆ ಪರಿಶೀಲಿಸಿ ವರದಿ ನೀಡಬೇಕಾಗುತ್ತದೆ. ಹೀಗಾಗಿ ಸಮಿತಿ ಪರಿಶೀಲಿಸುವವರಗೆ ಪ್ರಕರಣದಲ್ಲಿನ ಕಟ್ಟಡಗಳ ತೆರವು ವಿಚಾರದಲ್ಲೂ ಯಾವುದೇ ಆತುರದ ನಿರ್ಧಾರ ಬೇಡ. ಅದಕ್ಕಾಗಿ ಸರ್ಕಾರ ಜಿಲ್ಲಾ ಸಮಿತಿಗಳನ್ನು ರಚಿಸಬೇಕು, ಸಮಿತಿ ಪರಿಶೀಲಿಸಿ ನಿಲುವು ತಿಳಿಸಿದ ನಂತರವೇ ನ್ಯಾಯಾಲಯ ಆ ಬಗ್ಗೆ ನಿರ್ಧರಿಸಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.