ಬೆಂಗಳೂರು:ಇಂಜಿನಿಯರಿಂಗ್ ಕೃಷಿ ನಿರ್ದೇಶನಾಲಯ ಸ್ಥಾಪನೆ ಮಾಡುವ ಕುರಿತು ಬೆಂಗಳೂರು ಹಾಗೂ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಮತ್ತು ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ವರದಿ ಬಂದ ನಂತರ ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಇಂದು ಶೂನ್ಯವೇಳೆಯಲ್ಲಿ ಸದಸ್ಯ ಶಿವರಾಜ ಪಾಟೀಲ್, ರಾಜ ವೆಂಕಟಪ್ಪ ನಾಯಕ್ ಹಾಗೂ ವೆಂಕಟರಾವ್ ನಾಡಗೌಡ ಮತ್ತಿತರರು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಬಿಟೆಕ್ ಪದವೀಧರ ವಿದ್ಯಾರ್ಥಿಗಳಿಗೆ ಕೃಷಿ ಇಲಾಖೆ ನೇಮಕಾತಿಯಲ್ಲಿ ಶೇ.15ರಷ್ಟು ಮೀಸಲಾತಿ ನೀಡಬೇಕೆಂದು ಹೋರಾಟ ನಡೆಸುತ್ತಿರುವ ಬಗ್ಗೆ ಸಚಿವರ ಗಮನ ಸೆಳೆದರು.
ಇದಕ್ಕೆ ಉತ್ತರಿಸಿದ ಸಚಿವ ಬಿ ಸಿ ಪಾಟೀಲ್ ಅವರು, ಕಳೆದ ವಾರ ಬೆಂಗಳೂರು ಮತ್ತು ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಗಳು ಮತ್ತಿತರರು ಬೆಂಗಳೂರಿಗೆ ಆಗಮಿಸಿ ಸರ್ಕಾರದ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಬೇಡಿಕೆಯಂತೆ ಕೃಷಿ ಎಂಜಿನಿಯರಿಂಗ್ ನಿರ್ದೇಶನಾಲಯ ಸ್ಥಾಪಿಸಲು ಮನವಿ ಮಾಡಿದ್ದಾರೆ. ಸಮಿತಿಯ ವರದಿ ಬಂದ ಬಳಿಕ ಸರ್ಕಾರ ಸಕಾರಾತ್ಮಕ ನಿರ್ಧಾರವನ್ನು ತೆಗೆದುಕೊಳ‍್ಳಲಿದೆ ಎಂದರು.
ಬಿಟೆಕ್ ವಿದ್ಯಾರ್ಥಿಗಳಿಗೆ ಕೃಷಿ ಇಲಾಖೆಯ ನೇಮಕಾತಿಯಲ್ಲಿ ಶೇ.2.3ರಷ್ಟು ಮೀಸಲಾತಿ ನೀಡಲಾಗುತ್ತಿದೆ. 1500 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದರೆ, ಕನಿಷ್ಠ 150 ಸಹಾಯಕ ಅಧಿಕಾರಿಗಳು ಹಾಗೂ ಅಷ್ಟೇ ಪ್ರಮಾಣದ ಕೃಷಿ ಅಧಿಕಾರಿಗಳು ನೇಮಕವಾಗುತ್ತಾರೆ. ಎಲ್ಲಿಯೂ ಅನ್ಯಾಯವಾಗದಂತೆ ಸರ್ಕಾರ ಕ್ರಮಕೈಗೊಳ್ಳಲಿದೆ. ಬಿಟೆಕ್ ವಿದ್ಯಾರ್ಥಿಗಳಿಗೆ ಐದು ಕೋರ್ಸ್ ಸೇರಿಸಲಾಗಿದೆ. ಜೈವಿಕ ತಂತ್ರಜ್ಞಾನ, ಇಂಜಿನಿಯರಿಂಗ್, ಆಹಾರ ವಿಜ್ಞಾನ, ತಂತ್ರಜ್ಞಾನ ಸೇರಿದಂತೆ 5 ಕೋರ್ಸ್‍ಗಳಿದ್ದು, ಇಲ್ಲಿಯೂ ಅವರಿಗೆ ಮೀಸಲಾತಿ ಸಿಗಲಿದೆ. ಶೇ.15ರಷ್ಟು ಮೀಸಲಾತಿ ನೀಡಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಬೇಕು. ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಹಾಸ್ಟೆಲ್‍ನಿಂದ ಹೊರ ಹಾಕದಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಅನಧಿಕೃತ ಶೆಡ್ ತೆರವು: ಬೇಗೂರು ಒಳಕುಂಟೆ ಗ್ರಾಮದಲ್ಲಿ 2.6 ಎಕರೆ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಲೇಔಟ್‍ನಲ್ಲಿ ಅನಧಿಕೃತವಾಗಿ ಹಾಕಿಕೊಂಡಿರುವ ಶೆಡ್‍ಗಳನ್ನು ಕೂಡಲೇ ತೆರವುಗೊಳಿಸುವಂತೆ ಬಿಡಿಎ ಆಯುಕ್ತರಿಗೆ ಸೂಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಗೆ ತಿಳಿಸಿದರು. ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಜಿ.ಸೋಮಶೇಖರರೆಡ್ಡಿ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ಈಗಾಗಲೇ ಬಿಡಿಎಯಿಂದ ನೋಟಿಸ್ ನೀಡಲಾಗಿದೆ. ಕೂಡಲೇ ತೆರವುಗೊಳಿಸುವಂತೆ ಆದೇಶಿಸುವುದಾಗಿ ತಿಳಿಸಿದರು.