ಬೆಂಗಳೂರು:ಕಬ್ಬಿನ ಉಪ ಉತ್ಪನ್ನಗಳ ಲಾಭ ಕಬ್ಬು ಬೆಳೆಗಾರರಿಗೆ ನೀಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ತಿಳಿಸಿದರು. ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೇ ಮಾದರಿಯಲ್ಲಿ ಕಬ್ಬಿನ ಕಟಾವು ಮತ್ತು ಸಾಗಣೆ ವೆಚ್ಚ ಕಡಿತದ ಕುರಿತು ತಿಂಗಳಿನಲ್ಲೇ ಸಮಿತಿ ರಚಿಸಿ ವರದಿ ಪಡೆದು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
6.22 ಲಕ್ಷ ಮೆ.ಟ್ರನ್ ಕಬ್ಬನ್ನು ಕಳೆದ ಬಾರಿ ಅರೆದಿದ್ದೆವು. ಈ ಬಾರಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೆಚ್ಚು ಅರೆದರೆ ರೈತರಿಗೆ ನೀಡುವ ಲಾಭವನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು. ಉಪ ಉತ್ಪನ್ನದ ಲಾಭ 75 ರೂ ನೀಡುವಂತೆ ರೈತರು ಕೇಳಿದ್ದಾರೆ. ಆದರೆ, ನಾವು ಈಗ 50 ರೂ. ಮೊದಲ ಹಂತದಲ್ಲಿ ನೀಡುತ್ತಿದ್ದೇವೆ. ಕಬ್ಬು ಅರೆಯುವ ಕೆಲಸ ಮುಗಿದ ನಂತರ ಇನ್ನು 25 ರೂ.ಗೂ ಹೆಚ್ಚಿನ ಹಣ ಕೊಡಿಸುವ ಪ್ರಯತ್ನ ಮಾಡಲಾಗುತ್ತದೆ ಎಂದರು.
ತಲಾ 50 ರೂ. ಮೊದಲ ಕಂತಿನ ಹಣವನ್ನು ರೈತರಿಗೆ ನೀಡಲಿದ್ದು, ಒಟ್ಟು 202 ಕೋಟಿ ಹಣ ರೈತರ ಖಾತೆಗೆ ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ. ಈ ರೀತಿ ಲಾಭದ ಹಣ ರೈತರಿಗೆ ನೀಡುತ್ತಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರದ ನಂತರ ಮೂರನೇ ರಾಜ್ಯ ಕರ್ನಾಟಕವಾಗಿದೆ ಎಂದರು.
ಕಬ್ಬು ಬೆಳೆಗಾರರಿಗೆ ನೀಡಬೇಕಿದ್ದ 19,624 ಕೋಟಿ ಹಣವನ್ನು ಪಾವತಿ ಮಾಡಲಾಗಿದೆ. ಕಬ್ಬು ಬೆಳೆಗಾರರಿಗೆ ಯಾವುದೇ ಬಾಕಿ ಉಳಿಸಿಕೊಳ್ಳದ ರಾಜ್ಯ ಕರ್ನಾಟಕವಾಗಿದೆ ಎಂದು ಹೇಳಿದರು.