ಕರ್ನಾಟಕ

karnataka

ETV Bharat / state

ಹೊಸ ವರ್ಷಾಚರಣೆ: ಬೆಂಗಳೂರು ಪೊಲೀಸರಿಗೆ ಎಚ್ಚರಿಕೆ ವಹಿಸಲು ಕಮಿಷನರ್​ ಸೂಚನೆ - Meeting about new year

ಹೊಸ ವರ್ಷದ ಸಂಭ್ರಮಕ್ಕೆ ಕ್ಷಣಗಣನೆ - ಪೊಲೀಸರಿಗೆ ಅಲರ್ಟ್​ ಇರುವಂತೆ ಕಮಿಷನರ್​ ಸೂಚನೆ- ಹಲವೆಡೆ ಪೊಲೀಸರಿಂದ ವಿಶೇಷ ಕಾರ್ಯಾಚರಣೆ

Pratap Reddy
ಪ್ರತಾಪ್​ ರೆಡ್ಡಿ

By

Published : Dec 26, 2022, 12:53 PM IST

ಬೆಂಗಳೂರು: ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಭಯೋತ್ಪಾದಕ ಸಂಚಿನ ಶಂಕೆ ಹಿನ್ನೆಲೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಪ್ರತಾಪ್​ ರೆಡ್ಡಿ,ಕೇಂದ್ರ ತನಿಖಾ ಸಂಸ್ಥೆಗಳಿಂದ ಯಾವುದೇ ಎಚ್ಚರಿಕೆ ಬಂದಿಲ್ಲ, ಆದರೂ ಸಹ ನಗರದಲ್ಲಿ ಪೊಲೀಸರಿಗೆ ಸೂಕ್ತ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ಯಾವುದೇ ಪ್ರತ್ಯೇಕ ಎಚ್ಚರಿಕೆ ನಮಗೆ ಬಂದಿಲ್ಲ. ಆದರೂ ಕಳೆದ ಮೂರು ತಿಂಗಳ ಅವಧಿಯಲ್ಲಿ ಮಂಗಳೂರು ಮತ್ತು ಕೊಯಮತ್ತೂರಿನಲ್ಲಿ ನಡೆದಿರುವ ಬಾಂಬ್ ಸ್ಪೋಟ ಪ್ರಕರಣಗಳು ಕಣ್ಮುಂದೆ ಇರುವುದರಿಂದ ಬೆಂಗಳೂರು ಪೊಲೀಸರಿಗೆ ಅಲರ್ಟ್ ಇರುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ನಗರದಲ್ಲಿ ಅವಧಿಗೂ ಮೀರಿ ಹೊಟೇಲ್, ರೆಸ್ಟೋರೆಂಟ್​, ಪಬ್​ಗಳು ಕಾರ್ಯನಿರ್ವಹಿಸುತ್ತಿರುವುದರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಲ್ಲದೇ ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ದಾಳಿ‌ ನಡೆಸಿ ಪರಿಶೀಲನೆ ಕೈಗೊಳ್ಳಲಾಗುತ್ತಿದೆ ಎಂದರು.

ದಾಳಿ ವೇಳೆ ಕೆಲವೆಡೆ ಪೊಲೀಸ್ ಇಲಾಖೆ ನೀಡಿರುವ ಗೈಡ್ ಲೈನ್ಸ್ ಉಲ್ಲಂಘನೆ ಮಾಡಿರುವುದು, ಲೇಡಿಸ್ ಬಾರ್​ಗಳಲ್ಲಿ ಯುವತಿಯರನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದು ಪತ್ತೆಯಾಗಿದೆ. ಅಂತವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈಗಾಗಲೇ ಪಶ್ಚಿಮ ವಿಭಾಗದಲ್ಲಿ 27 ಪ್ರಕರಣ ದಾಖಲಾಗಿದ್ದು, ಪೂರ್ವ ವಿಭಾಗದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಹೊಸ ವರ್ಷಾಚರಣೆಗೆ ಮಾಸ್ಕ್ ಕಡ್ಡಾಯ ಶೀಘ್ರ ನಿರ್ಧಾರ: ಸಚಿವ ಡಾ ಕೆ ಸುಧಾಕರ್

ಈ ಹಿಂದೆ ನಡೆದಿತ್ತು ಸಭೆ: ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಸಭೆ ನಡೆಸಿದ್ದರು. ನಗರ ಪೊಲೀಸ್ ಆಯುಕ್ತ ಸಿ.ಹೆಚ್.ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಈ ಸಭೆ ನಡೆದಿದ್ದು, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸುಬ್ರಹ್ಮಣ್ಯೇಶ್ವರ ರಾವ್, ಸಂದೀಪ್ ಪಾಟೀಲ್, ಡಿಸಿಪಿಗಳು ಭಾಗಿಯಾಗಿದ್ದರು.

ಬೆಂಗಳೂರು ಕೇಂದ್ರ ವಿಭಾಗದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್​ಗಳಲ್ಲಿ ಹೆಚ್ಚಿನ ಜನಸಮೂಹ ಸೇರಲಿದ್ದು, ಕೈಗೊಳ್ಳಬೇಕಾದ ಅಗತ್ಯ ಭದ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದರು. ಅಲ್ಲದೇ ಬೆಂಗಳೂರು ಕೇಂದ್ರ ವಿಭಾಗವೊಂದರಲ್ಲೇ 31 ಪಬ್, 5 ಡಿಸ್ಕೋಥೆಕ್, 26 ಲೇಡಿಸ್ ಬಾರ್, 13 ಕ್ಲಬ್ ಹಾಗೂ 71 ರೆಸ್ಟೋರೆಂಟ್​ಗಳಿದ್ದು, ಅವುಗಳ ಮಾಲೀಕರೊಂದಿಗೆ ನಿಯಮಾವಳಿಗಳ ಬಗ್ಗೆ ಈಗಾಗಲೇ ಚರ್ಚೆ ಮಾಡಲಾಗಿದೆ.

ಹೊಸ ವರ್ಷಾಚರಣೆ ಮೇಲೆ ಉಗ್ರರ ಕಣ್ಣು ಬೀಳಬಹುದು ಎಂಬ ಗುಪ್ತಚರ ಇಲಾಖೆಯು ಮಾಹಿತಿ ನೀಡಿತ್ತು. ಈ ಅನ್ವಯ ಈಗಾಗಲೇ ನಗರದ ವಿವಿಧ ಹೋಟೆಲ್, ಲಾಡ್ಜ್​ಗಳಲ್ಲಿ‌ ಬಂದು ನೆಲೆಸಿರುವವರ ಬಗ್ಗೆ ಮಾಹಿತಿ ಕಲೆಹಾಕುವಂತೆ ಎಲ್ಲ ವಿಭಾಗಗಳ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಈ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ವರದಿಯಾದ ಉದಾಹರಣೆಗಳು ಇರುವುದರಿಂದ ಮಹಿಳೆಯರ ಭದ್ರತೆಗೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ.

ವರ್ಷಾಚರಣೆಯ ಸಂದರ್ಭದಲ್ಲಿ ಕಿಕ್ಕೇರಿಸಲು ವಿಶಾಖಪಟ್ಟಣಂ, ಓಡಿಶಾ, ಅಸ್ಸೋಂನಿಂದ ಮಾದಕ ಪದಾರ್ಥಗಳು ನಗರ ಪ್ರವೇಶಿಸುವುದನ್ನು ತಡೆಯಲು ಸ್ಥಳೀಯ, ಅನ್ಯರಾಜ್ಯ ಹಾಗೂ ವಿದೇಶಿ ಮಾದಕ ದಂಧೆಕೋರರ ಮೇಲೆ ಪೊಲೀಸರು ಹದ್ದಿನ ಕಣ್ಣಿರಿಸಿದ್ದಾರೆ. ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡೇ ಈ ಬಾರಿ ಹೊಸ ವರ್ಷವನ್ನು ಆಚರಿಸುವ ತಯಾರಿಗಳು ನಡೆಯುತ್ತಿವೆ.

ಹರ್ಷಾಚರಣೆಗೆ ಅಡ್ಡಿಯಾದಿತೇ ಕೊರೊನಾ..?:ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರಲಿದೆ. ಈ ನಡುವೆ ಕೊರೊನಾ ಹರ್ಷಾಚರಣೆಗೆ ಅಡ್ಡಿಯಾಗಲಿದೆಯೇ? ಎಂಬ ಆತಂಕ ಜನರಲ್ಲಿದೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಡಾ.ಕೆ ಸುಧಾಕರ್​, ಹೊಸ ವರ್ಷಾಚರಣೆ ವೇಳೆ ಮಾಸ್ಕ್ ಕಡ್ಡಾಯಗೊಳಿಸುವ ವಿಚಾರವು ಸರ್ಕಾರದ ಪರಿಶೀಲನೆಯಲ್ಲಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಅಂತು ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಈ ಬಾರಿ ಹೊಸ ವರ್ಷವನ್ನು ಆಚರಿಸಲಿದ್ದೇವೆ.

ಇದನ್ನೂ ಓದಿ:ಭಾರತದಲ್ಲಿಂದು 196 ಹೊಸ ಕೋವಿಡ್​ ಕೇಸ್​ ಪತ್ತೆ.. ಒಮಿಕ್ರಾನ್ ಬಿಎಫ್‌.7 ಕುರಿತು ಎಚ್ಚರ

ABOUT THE AUTHOR

...view details