ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯ ಆಸ್ತಿ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡುವಂತೆ ಆಯುಕ್ತರಾದ ಮಂಜುನಾಥ್ ಪ್ರಸಾದ್ ಸೂಚಿಸಿದ್ದಾರೆ.
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ನೀಡಲು ಆಯುಕ್ತರ ಸೂಚನೆ - commissioners meeting with officials
ಮಲ್ಲೇಶ್ವರಂ ಐಪಿಪಿ ಸೆಂಟರ್‌ನಲ್ಲಿ ಎಲ್ಲಾ ವಲಯದ ಕಂದಾಯ ಅಧಿಕಾರಿಗಳ ಜೊತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸಭೆ ನಡೆಸಿದರು. ಈ ಸಭೆಯಲ್ಲಿ ಹಿಂದಿನ ವರ್ಷಗಳ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.
ಮಲ್ಲೇಶ್ವರಂ ಐಪಿಪಿ ಸೆಂಟರ್‌ನಲ್ಲಿ ಎಲ್ಲಾ ವಲಯದ ಕಂದಾಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಈ ಸೂಚನೆ ನೀಡಿದ್ದಾರೆ. ಕೊರೊನಾ ಸಂಕಷ್ಟದಿಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಪಾಲಿಕೆ ಖಾತೆಯಲ್ಲಿ ಕೇವಲ 68 ಕೋಟಿ ರೂ. ಮಾತ್ರ ಬಾಕಿ ಉಳಿದಿದೆ. ಹೀಗಾಗಿ ಈ ವರ್ಷದ ಆಸ್ತಿ ತೆರಿಗೆ ಪಾವತಿಗೆ 2021 ಮಾರ್ಚ್ವರೆಗೂ ಅವಕಾಶ ಇದೆ. ಈ ಹಿಂದಿನ ವರ್ಷಗಳ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದ್ದಾರೆ.
ನೋಟಿಸ್ಗೂ ಉತ್ತರ ನೀಡಿಲ್ಲ ಎಂದರೆ, ವಾಣಿಜ್ಯ ಕಟ್ಟಡ ಅಥವಾ ಮನೆಯ ವಸ್ತುಗಳನ್ನು ಜಪ್ತಿ ಮಾಡುವ ಅಧಿಕಾರವೂ ಪಾಲಿಕೆಗೆ ಇರಲಿದೆ. ಇನ್ನು ಕೊರೊನಾ ಸಂದರ್ಭದಲ್ಲಿಯೂ ದಕ್ಷತೆಯಿಂದ ಕೆಲಸ ಮಾಡಬೇಕಿದ್ದು, ಜೀವದ ಜೊತೆ ಜೀವನವನ್ನೂ ಸಾಗಿಸಬೇಕಿದೆ. ಹೀಗಾಗಿ ಕೊರೊನಾ ಕೆಲಸದ ಜೊತೆ ಆಸ್ತಿ ತೆರಿಗೆ ಸಂಗ್ರಹದ ಕಡೆಗೂ ಗಮನ ಹರಿಸಲು ತಿಳಿಸಲಾಗಿದೆ.