ಬೆಂಗಳೂರು: ನಗರ ಪೊಲೀಸ್ ಇಲಾಖೆಯಲ್ಲಿ ಸುಧಾರಣೆ ಹಾಗೂ ಜನಸ್ನೇಹಿ ಪೊಲೀಸ್ ನಿರ್ಮಾಣಕ್ಕಾಗಿ ಹೊಯ್ಸಳ ಸಿಬ್ಬಂದಿ ಧರಿಸುತ್ತಿದ್ದ ಬಾಡಿವೋರ್ನ್ ಕ್ಯಾಮರಾಗಳು ಇನ್ನು ಮುಂದೆ ಕಾನೂನು ಸುವ್ಯವಸ್ಥೆ ವಿಭಾಗ ಠಾಣೆಗೊಂದರಂತೆ ನೀಡಲು ಕ್ರಮ ಕೈಗೊಂಡಿರುವ ನಗರ ಪೊಲೀಸ್ ಇಲಾಖೆ, ಈ ಸಂಬಂಧ ಪೊಲೀಸರನ್ನು ಹುರಿದುಂಬಿಸಲು ಸ್ವತಃ ನಗರ ಪೊಲೀಸ್ ಆಯುಕ್ತರೇ ಬಾಡಿವೋರ್ನ್ ಕ್ಯಾಮರಾ ಧರಿಸಿದ್ದಾರೆ.
ಬಾಡಿವೋರ್ನ್ ಕ್ಯಾಮರಾ ಧರಿಸಿ ಅಧಿಕೃತ ಪೊಲೀಸ್ ಟ್ವಿಟರ್ ಅಕೌಂಟ್ನಲ್ಲಿ ಕಮಿಷನರ್ ದಯಾನಂದ ಪೋಸ್ಟ್ ಮಾಡಿದ್ದಾರೆ. ದಯಾನಂದ ಅವರು ಆಯುಕ್ತರಾದ ಬಳಿಕ ಹೊಯ್ಸಳ ಸಿಬ್ಬಂದಿಗೂ ಕ್ಯಾಮರ ಧರಿಸಿ, ವಾಹನದಲ್ಲಿ ಜಿಪಿಎಸ್ ವ್ಯವಸ್ಥೆ ಅಳವಡಿಸಲು ಕ್ರಮ ಕೈಗೊಂಡಿದ್ದರು. ಅಲ್ಲದೆ ಖುದ್ದು ಹೊಯ್ಸಳದಲ್ಲಿ ಸಂಚರಿಸಿ ಪರಿಸ್ಥಿತಿ ಬಗ್ಗೆ ಅವಲೋಕಿಸಿದ್ದರು. ಇದರ ಮುಂದುವರೆದ ಭಾಗವೆಂಬಂತೆ ಕಾನೂನು ಸುವ್ಯವಸ್ಥೆಯ ವಿಭಾಗದ ಇನ್ಸ್ಪೆಕ್ಟರ್ಗಳಿಗೂ ನೀಡಲು ಕ್ರಮ ಕೈಗೊಂಡಿದ್ದರು.
ನಗರದಲ್ಲಿರುವ 111 ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ತಲಾ ಒಂದು ಬಾಡಿವೋರ್ನ್ ಕ್ಯಾಮರಾ ನೀಡಲು ಮುಂದಾಗಿದ್ದು, ಸೂಕ್ತ ತರಬೇತಿ ನೀಡಿ ಇನ್ನೊಂದು ವಾರದಲ್ಲಿ ಇನ್ಸ್ಪೆಕ್ಟರ್ಗಳಿಗೆ ವಿತರಿಸಲು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತೀರ್ಮಾನಿಸಿದ್ದಾರೆ. ಪೊಲೀಸ್ ನಡವಳಿಕೆ ಹಾಗೂ ವಾಹನ ಸವಾರರೊಂದಿಗೆ ನಡೆಯುವ ಅನಗತ್ಯ ಮಾತಿನ ಸಂಘರ್ಷ ತಪ್ಪಿಸಲು ಕೆಲವು ತಿಂಗಳ ಹಿಂದೆ ಟ್ರಾಫಿಕ್ ಪೊಲೀಸರಿಗೆ ಬಾಡಿವೋರ್ನ್ ಕ್ಯಾಮರಾ ನೀಡಲಾಗಿತ್ತು. ಅಲ್ಲದೆ ಕೆಲ ದಿನಗಳ ಹಿಂದೆ 242 ಹೊಯ್ಸಳ ಸಿಬ್ಬಂದಿಗೆ ಒಟ್ಟು 482 ಕ್ಯಾಮರಾ ನೀಡಲಾಗಿತ್ತು. ಸಾರ್ವಜನಿಕರ ವಲಯದಲ್ಲಿ ಮೆಚ್ಚುಗೆ ಹಾಗೂ ದೂರುಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೇಫ್ ಸಿಟಿ ಪ್ರಾಜೆಕ್ಟ್‌ನಡಿ ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಇನ್ಸ್ಪೆಕ್ಟರ್ಗಳಿಗೆ ಬಾಡಿವೋರ್ನ್ ಕ್ಯಾಮರಾ ನೀಡಲಾಗುತ್ತಿದೆ.
ಇನ್ಸ್ಪೆಕ್ಟರ್ಗಳಿಗೆ ಯಾಕೆ ಬಾಡಿವೋರ್ನ್ ಕ್ಯಾಮರಾ? :ಬೆಂಗಳೂರಿನಂತಹ ನಗರದಲ್ಲಿ ಕಾರ್ಯನಿರ್ವಹಿಸುವ ಇನ್ಸ್ಪೆಕ್ಟರ್ಗಳಿಗೆ ಅಪರಾಧ ಪ್ರಕರಣ ಬೇಧಿಸುವುದರ ಜೊತೆಗೆ ಬಂದೋಬಸ್ತ್, ಪ್ರತಿಭಟನೆ-ಧರಣಿ ಹಾಗೂ ಗಲಾಟೆ ನಡೆದಾಗ ಇನ್ಸ್ಪೆಕ್ಟರ್ಗಳು ಸ್ಥಳಕ್ಕೆ ಹೋಗಿ ಪರಿಸ್ಥಿತಿ ನಿಭಾಯಿಸಬೇಕಾಗುತ್ತದೆ. ಪ್ರಕರಣ ದಾಖಲಿಸುವಲ್ಲಿ, ಆರೋಪಿಗಳನ್ನು ಹಿಡಿಯುವಲ್ಲಿ ಕೊಂಚ ತಡವಾದರೂ ಪೊಲೀಸರ ಮೇಲೆ ದೂರುದಾರರು ಅನಗತ್ಯ ಆರೋಪ ಮಾಡಿ ರಾದ್ಧಾಂತ ಸೃಷ್ಟಿ ಮಾಡುತ್ತಾರೆ. ಇದು ಇನ್ಸ್ಪೆಕ್ಟರ್ ಮಾನಸಿಕ ಸ್ಥೈರ್ಯ ಕುಗ್ಗಿಸುವಂತೆ ಮಾಡುತ್ತದೆ.