ಬೆಂಗಳೂರು: ಸದನದಲ್ಲಿ ವರ್ಗಾವಣೆ ಕಮಿಷನ್ ರೇಟ್ ಕಾರ್ಡ್ ಸದ್ದು ಮಾಡಿತು. ವಿಷಯ ಪ್ರಸ್ತಾಪ ಮಾಡಿದ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ವರ್ಗಾವಣೆ ದಂಧೆ ಆರೋಪ ಮಾಡಿದ್ರು ಅಂತ ಸದನದಲ್ಲಿ ಪತ್ರ ತೋರಿಸಿದ್ರು. ಆದ್ರೆ, ಆ ಪತ್ರ ನಮಗೆ ಕೊಡದೇ ಅವರೇ ತಗೊಂಡು ಹೋದ್ರು ಎಂದು ಟಾಂಗ್ ನೀಡಿದರು.
ನಮ್ಮ ಮೇಲೆ ಕುಮಾರಸ್ವಾಮಿ ವರ್ಗಾವಣೆ ದಂಧೆ ಆರೋಪ ಮಾಡಿದ್ದಾರೆ. ಆದರೆ, ಅದು ಸುಳ್ಳು, ಯಾವುದೇ ವರ್ಗಾವಣೆ ದಂಧೆ ನಡೆಯುತ್ತಿಲ್ಲ. ಪತ್ರಿಕೆಯಲ್ಲಿ ಹೆಚ್ಡಿಕೆ ಪತ್ರ ಕೊಟ್ಟಿದ್ದಾರೆ ಅಂತ ಬಂದಿದೆ. ಆದ್ರೆ, ನಮಗೆ ಕೊಡಲೇ ಇಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನೀವು ಕೇಳಲೇ ಇಲ್ಲವಲ್ಲ. ನೀವು ಕೇಳಿದ್ದರೆ ಕೊಡುತ್ತಿದೆ, ಪತ್ರಿಕೆಯಲ್ಲಿ ಬಂದಿರುವುದಕ್ಕೆ ನಾನು ಜವಾಬ್ದಾರಿ ಅಲ್ಲ ಎಂದರು.
ಇದೇ ವೇಳೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಕಳೆದ 2018 ರಲ್ಲಿಯೇ ಕುಮಾರಸ್ವಾಮಿ ಸಿಎಂ ಆಗಿದ್ದಾಗ ರೇಟ್ ಕಾರ್ಡ್ ಬಂದಿತ್ತು. ಸುಮ್ನೆ ಆರೋಪ ಮಾಡಬೇಕು ಅಂತ ಮಾಡುತ್ತಿದ್ದೀರಿ. ನೀವು ಮಾಡಿದ ಆರೋಪದ ಬಗ್ಗೆ ದಾಖಲೆ ಇದ್ರೆ ಕೊಡಿ. ದಾಖಲೆ ಕೊಟ್ರೆ ನಮ್ಮ ಸಿಎಂ ತನಿಖೆ ಮಾಡ್ತಾರೆ ಎಂದು ತಿಳಿಸಿದರು.
ಈ ರೇಟ್ ಕಾರ್ಡ್ ನಮ್ಮ ಇಲಾಖೆ ಫಿಕ್ಸ್ ಮಾಡಿಲ್ಲ. ಅವರು ಸಿಎಂ ಆಗಿದ್ದಾಗಲೇ ಅವರ ಮಾಹಿತಿ ಈಗ ಹೇಳ್ತಿದ್ದಾರೆ. ಐಎಂಎ ಹಗರಣದಲ್ಲಿ ವಿಜಯ ಶಂಕರ್ ಅಂತಹ ಆಫೀಸರ್ ಆತ್ಮಹತ್ಯೆ ಮಾಡಿಕೊಂಡರು. ಆಗ ಕುಮಾರಸ್ವಾಮಿಯವರೇ ಸಿಎಂ ಆಗಿದ್ದರು. ಒಂದೂವರೆ ತಿಂಗಳಿಗೆ ತಡೆಯೋಕ್ಕಾಗದೇ ಆರೋಪ ಮಾಡೋದು ಸರಿಯಲ್ಲ. ಸುಮ್ಮನೆ ತೇಜೋವಧೆ ಮಾಡುವುದು ಸರಿಯಲ್ಲ. ಒಬ್ಬ ಕೆಎಎಸ್ ಅಧಿಕಾರಿಯನ್ನು ಒಂದೇ ವರ್ಷದಲ್ಲಿ ಏಳು ಬಾರಿ ವರ್ಗ ಮಾಡಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಏಳು ಬಾರಿ ಒಂದೇ ವರ್ಷದಲ್ಲಿ ವರ್ಗಾವಣೆ ಮಾಡಿದ್ದರು ಎಂದು ಆರೋಪಿಸಿದರು.