ಬೆಂಗಳೂರು: ವಿಧಾನ ಪರಿಷತ್ನಲ್ಲಿ ಶೇ.40ರಷ್ಟು ಕಮಿಷನ್ ಆರೋಪದ ವಿಚಾರವಾಗಿ ಗದ್ದಲ ಉಂಟಾಯಿತು. ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರು ಪರಸ್ಪರ ವಾಗ್ದಾಳಿ ನಡೆಸಿಕೊಂಡರು. ಇದರಿಂದ ಕಲಾಪವನ್ನು ಸಭಾಪತಿ ನಾಳೆಗೆ ಮುಂದೂಡಿದರು.
ನಿರಾಧಾರವಾಗಿ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕರು ಆರೋಪಿಸಿದ್ದಾರೆ. ಇದಕ್ಕೆ ಪುರಾವೆ ಒದಗಿಸಬೇಕು ಎಂದು ಸಚಿವ ಅಶ್ವತ್ಥ ನಾರಾಯಣ ಪಟ್ಟು ಹಿಡಿದರು. ಉತ್ತರಿಸಲು ಮುಂದಾದ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ವಿಶ್ವಗುರು ಎನಿಸಿರುವ ಪ್ರಧಾನಿ ನರೇಂದ್ರ ಮೋದಿ ಎಂದು ಹೇಳುತ್ತಿದ್ದಂತೆ ಗದ್ದಲ ಆರಂಭವಾಯಿತು.
ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಅವರು ಪ್ರಧಾನಮಂತ್ರಿ ಅವಹೇಳನ ಮಾಡಲಾಗಿದೆ ಇದಕ್ಕೆ ಪ್ರತಿಪಕ್ಷ ನಾಯಕರು ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು. ನಂತರ ಆಡಳಿತ ಹಾಗೂ ಪ್ರತಿಪಕ್ಷ ನಾಯಕರು ಎದ್ದು ನಿಂತರು. ಸಭಾಪತಿಗಳು ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ಆದರೆ, ಪ್ರತಿಪಕ್ಷ ಸದಸ್ಯರು ಬಾವಿಗಿಳಿಯಲು ಮುಂದಾದರು. ಆಗ ಆಸನಕ್ಕೆ ಮರಳುವಂತೆ ಸಭಾಪತಿ ಸೂಚಿಸಿದರೂ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ಆರಂಭಿಸಿದರು. ಇದರಿಂದ ಮೊದಲಿಗೆ ಕಲಾಪವನ್ನು ಹತ್ತು ನಿಮಿಷ ಮುಂದೂಡಿದರು.
ಇದಾದ ಕಲಾಪ ಆರಂಭವಾದ ನಂತರ ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ನೀವು ಬಂದ್ ಮಾಡಿದ್ದ ಲೋಕಾಯುಕ್ತವನ್ನು ಓಪನ್ ಮಾಡಿದ್ದೇವೆ ಎಂದರು. ಈ ವೇಳೆ ಗದ್ದಲ ಮತ್ತೆ ಮುಂದುವರಿತು. ಆಗ ಸಭಾಪತಿಗಳು ಸದಸ್ಯರ ಮನವೊಲಿಕೆಗೆ ಸಾಕಷ್ಟು ಪ್ರಯತ್ನ ನಡೆಸಿದರು. ಇದು ಸಾಧ್ಯವಾಗದಿದ್ದಾಗ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.
ತಂತ್ರಜ್ಞಾನದ ಸಹಕಾರ ಬಳಸಬಹುದಿತ್ತು:ಇದಕ್ಕೂ ಮುನ್ನ ರಾಜ್ಯದ ಮಳೆ ಹಾನಿ ಸಂಬಂಧ ನಿಯಮ 68ರಡಿ ಚರ್ಚೆಯಲ್ಲಿ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಪಾಲ್ಗೊಂಡು ಮಾತನಾಡಿ, ನೆರೆ ಸಮಸ್ಯೆಯ ಬಗ್ಗೆ ಸರ್ಕಾರವನ್ನೇ ದೂಷಿಸುವುದು ಸರಿಯಲ್ಲ. ಆದರೆ, ಈ ಸಾರಿ ಕೊಂಚ ಮುನ್ನೆಚ್ಚರಿಕೆ ವಹಿಸಬಹುದಿತ್ತು. ತಂತ್ರಜ್ಞಾನದ ಸಹಕಾರ ಇದ್ದರೂ ಬಳಸಿಕೊಳ್ಳದೇ ಈ ಅನಾಹುತ ಆಗಿದೆ ಎಂದರು.
ಮಳೆಯಿಂದ 99 ಜನರ ಸಾವು ಆಗಿದೆ. ಇವರಲ್ಲಿ ಮೂವರು ಕಣ್ಮರೆ ಆಗಿದ್ದಾರೆ. 9,500 ಕೋಟಿ ರೂ. ಹಾನಿ ಆಗಿದೆ. 27 ಸಾವಿರ ಹೆಕ್ಟೇರ್ ಭೂಮಿಯ ಬೆಳೆ ಹಾನಿ ಆಗಿದೆ. ತೋಟಗಾರಿಕೆ ಬೆಳೆ, ತೋಟದ ಬೆಳೆ ಹಾನಿಯಾಗಿದೆ. 573 ಮನೆ ನಾಶವಾಗಿದೆ. 570 ಕೋಟಿ ರೂ. ಪರಿಹಾರ ಮೊತ್ತ ಅಂದಾಜಿಸಲಾಗಿದೆ. ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಜನರ ಕಷ್ಟಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.