ಕರ್ನಾಟಕ

karnataka

By

Published : Dec 23, 2022, 10:10 PM IST

ETV Bharat / state

ಮುನಿರತ್ನ ವಿರುದ್ಧ ಕಮಿಷನ್ ಆರೋಪ: ಕೆಂಪಣ್ಣ ಸೇರಿ 18 ಮಂದಿಗೆ ಜಾಮಿನುರಹಿತ ವಾರೆಂಟ್

ಶೇ 40ರಷ್ಟು ಕಮಿಷನ್ ಆರೋಪ ಮಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿದಂತೆ 18 ಮಂದಿಗೆ ಕೋರ್ಟ್ ಜಾಮೀನುರಹಿತ ವಾರೆಂಟ್ ಜಾರಿ ಮಾಡಿದೆ.

ಮುನಿರತ್ನ ವಿರುದ್ಧ ಕಮಿಷನ್ ಆರೋಪ
ಮುನಿರತ್ನ ವಿರುದ್ಧ ಕಮಿಷನ್ ಆರೋಪ

ಬೆಂಗಳೂರು: ತೋಟಗಾರಿಕೆ ಮತ್ತು ಯೋಜನಾ ಸಚಿವ ಮುನಿರತ್ನ ಅವರ ವಿರುದ್ಧ ಶೇ.40ರಷ್ಟು ಕಮಿಷನ್ ಆರೋಪ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಸೇರಿದಂತೆ 18 ಮಂದಿಗೆ ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯ ಜಾಮೀನುರಹಿತ ವಾರೆಂಟ್ ಜಾರಿ ಮಾಡಿದೆ. ಮುನಿರತ್ನ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಎನ್. ಶಿವಕುಮಾರ್ ಈ ಆದೇಶ ಮಾಡಿದ್ದಾರೆ.

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ, ಉಪಾಧ್ಯಕ್ಷ ವಿ.ಕೃಷ್ಣ ರೆಡ್ಡಿ, ಕಾರ್ಯದರ್ಶಿ ಜಿ.ಎಂ.ರವೀಂದ್ರ ಮತ್ತು ಖಜಾಂಚಿ ಎಚ್.ಎಸ್.ನಟರಾಜ್ ಸೇರಿದಂತೆ ಪ್ರಕರಣದ ಇನ್ನಿತರ ಆರೋಪಿಗಳು ದೂರುದಾರ ಮುನಿರತ್ನ ವಿರುದ್ಧ ನೀಡಿರುವ ಹೇಳಿಕೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಅದು ದೂರುದಾರರ ವರ್ಚಸ್ಸಿಗೆ ಮೇಲ್ನೋಟಕ್ಕೆ ಧಕ್ಕೆ ಉಂಟು ಮಾಡಿದೆ ಎಂದು 2022ರ ನ.16ರಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಜೊತೆಗೆ, ಕೆಂಪಣ್ಣ ಸೇರಿದಂತೆ ದೂರಿನ 18 ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿ ವಿಚಾರಣೆಯನ್ನು ಡಿ.22ಕ್ಕೆ ಮುಂದೂಡಿತ್ತು.

ಮೊಕದ್ದಮೆ ಮತ್ತೆ ವಿಚಾರಣೆ ನಡೆಸಿದ ನ್ಯಾಯಾಧೀಶರು, ಕೆಂಪಣ್ಣ ಹಾಗೂ ಇತರೆ ಎಲ್ಲ ಆರೋಪಿಗಳು ವಿಚಾರಣೆಗೆ ಗೈರಾಗಿದ್ದರು. ಇದರಿಂದ ಎಲ್ಲಾ 19 ಮಂದಿ ಆರೋಪಿಗಳಿಗೆ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿ, ವಿಚಾರಣೆಯನ್ನು 2020ರ ಜ.19ಕ್ಕೆ ನ್ಯಾಯಾಲಯ ಮುಂದೂಡಿತು.

ತಮ್ಮ ವಿರುದ್ಧ ಶೇ.40ರಷ್ಟು ಕಮಿಷನ್ ಆರೋಪ ಮಾಡಿದ ಹಿನ್ನೆಲೆಯಲ್ಲಿ ಮುನಿರತ್ನ ಅವರು ಗುತ್ತಿಗೆದಾರರ ಸಂಘದ ಕೆಂಪಣ್ಣ ಹಾಗೂ ಇತರೆ 18 ಮಂದಿ ಪದಾಧಿಕಾರಿಗಳು ಮತ್ತು ಸದಸ್ಯರ ವಿರುದ್ಧ ಪ್ರತ್ಯೇಕವಾಗಿ ಕ್ರಿಮಿನಲ್ ಮಾನಹಾನಿ ಮೊಕದ್ದಮೆ ಹೂಡಿದ್ದಾರೆ.

ಇದನ್ನೂ ಓದಿ: ಗುತ್ತಿಗೆದಾರರ ಸಂಘದ ವಿರುದ್ಧ ₹50 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸಚಿವ ಮುನಿರತ್ನ

ABOUT THE AUTHOR

...view details