ಬೆಂಗಳೂರು: ಆಗಸ್ಟ್ 19ರಂದು ನಿಗದಿಯಾಗಿರುವ ಕಾಮೆಡ್-ಕೆ ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್ ಸುರಕ್ಷತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲು ಸೂಚಿಸಿದೆ.
ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್ಗಳಿಗೆ ಪ್ರವೇಶ ಕಲ್ಪಿಸುವ ಕಾಮೆಡ್-ಕೆ ಪರೀಕ್ಷೆಗಳನ್ನು ಮುಂದೂಡುವಂತೆ ವಕೀಲ ಅಬ್ದುಲ್ ಮನ್ನನ್ ಖಾನ್ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಇಂದು ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ವಿಭಾಗೀಯ ಪೀಠ, ಪರೀಕ್ಷೆ ಮುಂದೂಡಿದರೆ ವಿದ್ಯಾರ್ಥಿಗಳಿಗೆ ನಷ್ಟವಾಗಲಿದೆ. ಈಗಾಗಲೇ ಸಿಇಟಿ ಪರೀಕ್ಷೆ ನಡೆದಿರುವುದರಿಂದ ಕಾಮೆಡ್-ಕೆ ಪರೀಕ್ಷೆಯೂ ನಡೆಯುವ ಅಗತ್ಯವಿದೆ. ಸರ್ಕಾರ ಎಸ್ಎಸ್ಎಲ್ಸಿ ಹಾಗು ಸಿಇಟಿ ಪರೀಕ್ಷೆಯನ್ನು ನಡೆಸಿರುವುದರಿಂದ ಕಾಮೆಡ್-ಕೆ ಪರೀಕ್ಷೆ ನಡೆಸಲು ಮುಂದಾಗಿರುವುದು ಸರಿಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಕೊರೊನಾ ಇಡೀ ವಿಶ್ವವನ್ನೇ ಆವರಿಸಿದೆ. ಹಾಗೆಂದು ಸರ್ಕಾರವಾಗಲಿ, ಸಾರ್ವಜನಿಕಾರಗಲೀ ಸುಮ್ಮನೆ ಕುಳಿತಿಲ್ಲ. ಹೀಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲು ಅಡ್ಡಿಯಿಲ್ಲ ಎಂದಿರುವ ಕೋರ್ಟ್ ವಕೀಲರಾಗಿ ತಾವೇಕೆ ಅರ್ಜಿ ಹಾಕಿದ್ದೀರಿ?. ವಿದ್ಯಾರ್ಥಿಗಳಿಂದ ಅರ್ಜಿ ಹಾಕಿಸಿ, ಅವರ ಪರ ನೀವು ವಕಾಲತ್ತು ಹಾಕಲು ಬರುತ್ತಿರಲಿಲ್ಲವೇ ಎಂದು ಅರ್ಜಿದಾರರಾದ ವಕೀಲ ಖಾನ್ ಅವರನ್ನು ಪ್ರಶ್ನಿಸಿದೆ.
ಆಗಸ್ಟ್ 19 ರಂದು ಒಟ್ಟು 20 ಸಾವಿರ ಸೀಟುಗಳಿಗೆ 342 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಕಾಮೆಡ್-ಕೆ ಪರೀಕ್ಷೆ ಬರೆಯಲಿದ್ದಾರೆ.