ಬೆಂಗಳೂರು : ಕಾಮೆಡ್ ಕೆ ಯುಜಿಇಟಿ ಮತ್ತು ಯುನಿ-ಗೇಜ್ ( UNI-GAUGE) ಪ್ರವೇಶ ಪರೀಕ್ಷೆಯು ಜೂನ್ 20 ರಂದು ನಡೆಯಲಿದೆ. ಕರ್ನಾಟಕ ಪ್ರೊಫೆಷನಲ್ ಕಾಲೇಜಸ್ ಫೌಂಡೇಷನ್ ಟ್ರಸ್ಟ್ ಮತ್ತು ಯುನಿ-ಗೇಜ್ನಿಂದ ಮಾನ್ಯತೆ ಹೊಂದಿರುವ ಕಾಲೇಜುಗಳ ಬಿಇ/ಬಿಟೆಕ್ ಕೋರ್ಸ್ಗಳಿಗೆ ಈ ಪ್ರವೇಶ ಪರೀಕ್ಷೆಗಳು ನಡೆಯಲಿದೆ.
ದೇಶದಾದ್ಯಂತ 150ಕ್ಕೂ ಹೆಚ್ಚು ನಗರಗಳಲ್ಲಿನ 400 ಪರೀಕ್ಷಾ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಈ ಪರೀಕ್ಷೆ ನಡೆಯಲಿದೆ. ಈ ವರ್ಷ 80,000 ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ನಿರೀಕ್ಷೆ ಇದೆ ಎಂದು ಕಾಮೆಡ್ ಕೆ ಕಾರ್ಯದರ್ಶಿ ಡಾ.ಕುಮಾರ್ ತಿಳಿಸಿದರು. ಪರೀಕ್ಷೆ ಬರೆಯಲು ಇಚ್ಚಿಸುವ ಅಭ್ಯರ್ಥಿಗಳು WWW.Comedk.org ಅಥವಾ www.unigauge.com ಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಅರ್ಜಿ ಪ್ರಕ್ರಿಯೆ ಮಾರ್ಚ್ 22 ರಿಂದ ಮೇ 20ರವರೆಗೆ ನಡೆಯಲಿದೆ.
ಈ ಬಗ್ಗೆ ಮಾತನಾಡಿರುವ ಡಾ.ಕುಮಾರ್, ಇಂಜಿನಿಯರಿಂಗ್ ಶಿಕ್ಷಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ. ದೇಶದಾದ್ಯಂತ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದು ಸೂಕ್ತವಾದ ಸ್ಥಳವಾಗಿದೆ. ಕಳೆದ ಕೆಲ ವರ್ಷಗಳಿಂದ ಕಾಮೆಡ್ ಕೆ ಪರೀಕ್ಷೆ ಬರೆಯುತ್ತಿರುವ ಕರ್ನಾಟಕದ ಹೊರಗಿನ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್ ಹಿನ್ನೆಲೆ ಕಳೆದ ವರ್ಷ ಈ ಸಂಖ್ಯೆಯಲ್ಲಿ ಸ್ವಲ್ಪ ಇಳಿಮುಖವಾಗಿತ್ತು. ಈ ವರ್ಷ ಪರಿಸ್ಥಿತಿ ಹತೋಟಿಗೆ ಬಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ನಿರೀಕ್ಷೆ ಇದೆ ಎಂದರು.
ಕಾಮೆಡ್ ಕೆ ಕಾರ್ಯದರ್ಶಿ ಡಾ.ಕುಮಾರ್ ಇದನ್ನೂ ಓದಿ: ಹೆಚ್ಚುವರಿ ಶುಲ್ಕ ಕಟ್ಟದ ಮಕ್ಕಳಿಗೆ ಪರೀಕ್ಷೆಗೆ ನಕಾರ: ಪರಮಾಧಿಕಾರ ಅಸ್ತ್ರಪ್ರಯೋಗಿಸುವುದಾಗಿ ಶಿಕ್ಷಣ ಸಚಿವ ಎಚ್ಚರಿಕೆ
ಕಳೆದ ವರ್ಷ ಕೋವಿಡ್ ಸಮಯದಲ್ಲಿ 392 ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗಿತ್ತು. ಒಟ್ಟು 60,000 ವಿದ್ಯಾರ್ಥಿಗಳ ಪೈಕಿ 40,490 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ವರ್ಷವೂ ಹೆಚ್ಚಿನ ಸುರಕ್ಷತಾ ಕ್ರಮಗಳ ಜೊತೆಗೆ ಪರೀಕ್ಷಾ ಕೇಂದ್ರವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತದೆ. ಒಂದು ಕೊಠಡಿಯಲ್ಲಿ ಶೇ.50 ರಷ್ಟು ಆಸನ ವ್ಯವಸ್ಥೆ ಮಾಡಿ, ಸಾಮಾಜಿಕ ಅಂತರ ಕಾಯ್ದು ಕೊಳ್ಳಲಾಗುವುದು. ಪರೀಕ್ಷಾ ಕೇಂದ್ರಗಳ ಸಂಖ್ಯೆ 392 ರಿಂದ 400ಕ್ಕೆ ಹೆಚ್ಚಳ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲು 150 ನಗರಗಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಎರಡು ಸೆಶನ್ಗಳಲ್ಲಿ ಪರೀಕ್ಷೆ ನಡೆಯಲಿದ್ದು, ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಹಾಗೂ 12 ರಿಂದ 2 :5 ರವರೆಗೆ ಪರೀಕ್ಷೆಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.