ಬೆಂಗಳೂರು:ಕತ್ತಲಿನಿಂದ ಬೆಳಕಿನ ಕಡೆಗೆ ಕೊಂಡೊಯ್ಯುವ ಬೆಳಕಿನ ಹಬ್ಬಕ್ಕೆ ಸಿಲಿಕಾನ್ ಸಿಟಿಯಲ್ಲಿ ಭರದಿಂದ ತಯಾರಿ ಸಾಗುತ್ತಿದೆ. ಬದುಕಿನ ಅಂಧಕಾರ ಕಳೆದು ಜೀವನದಲ್ಲಿ ಬೆಳಕು ಬರಲಿ ಎಂದು ಪೂಜಿಸುವ ಹಬ್ಬಕ್ಕೆ ಜನರು ಸಕಲ ರೀತಿಯಲ್ಲಿಯೂ ಸಜ್ಜಾಗುತ್ತಿದ್ದಾರೆ.
ಕತ್ತಲೆಯ ಮೇಲೆ ಬೆಳಕು, ಅಜ್ಞಾನದ ಮೇಲೆ ಜ್ಞಾನ, ಕೆಡುಕಿನ ಮೇಲೆ ಒಳ್ಳೆಯದನ್ನು ಸಾರುವ ಹಬ್ಬ ದೀಪಾವಳಿ. ಅದಕ್ಕಾಗಿ ನಗರದ ಮಲ್ಲೇಶ್ವರ, ಜಯನಗರ, ಬಸವನಗುಡಿ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಕಣ್ಣು ಹಾಯಿಸಿದಷ್ಟು ಕಡೆ ಕಲರ್ ಕಲರ್ ಆಕಾಶ ಬುಟ್ಟಿಗಳು ಕಾಣಸಿಗುತ್ತಿವೆ. ಕಣ್ಮನ ಸೆಳೆಯುತ್ತಿರುವ ಆಕಾಶ ಬುಟ್ಟಿಗಳ ಖರೀದಿಯಲ್ಲಿ ಗ್ರಾಹಕರು ಬ್ಯುಸಿಯಾಗಿದ್ದಾರೆ.
ದೀಪಾವಳಿ ಹಬ್ಬದಲ್ಲಿ ಮನೆಯ ಮುಂಬಾಗಿಲು ಆಕರ್ಷಕವಾಗಿ ಕಾಣಲು ಆಕಾಶ ಬುಟ್ಟಿಯಿಂದ ಅಲಂಕಾರ ಮಾಡಲಾಗುತ್ತದೆ. ಇದಕ್ಕಾಗಿ ಹಲವು ಬಣ್ಣದ ಬೇರೆ ಬೇರೆ ಗಾತ್ರದ ಆಕಾಶ ಬುಟ್ಟಿಗಳನ್ನು ತಯಾರಿಸಲಾಗಿದೆ. ಬಣ್ಣ ಬಣ್ಣದ ಚೌಕಾಕಾರದ ಆಕಾಶಬುಟ್ಟಿ, ಲೋಟಸ್, ಪಕ್ಷಿಗೂಡು, ಡ್ರಮ್ ಸೇರಿದಂತೆ ಅನೇಕ ಮಾದರಿಯ ಆಕಾಶಬುಟ್ಟಿಗಳು ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಗಾತ್ರ ಹಾಗೂ ವಿನ್ಯಾಸಗಳಿಗೆ ತಕ್ಕಂತೆ ಬೆಲೆ ನಿಗದಿಯಾಗಿದೆ. ಅದರಲ್ಲಿ ಹೆಚ್ಚಾಗಿ ಕೋಮಲ್ ಡಿಸೈನ್, ಗುಲಾಬ್ ರಂಗೀಲಾ, ನಕ್ಷತ್ರ ಮಾದರಿ, ಕಂದಿಲು ಆಕಾರದ ಆಕಾಶ ಬುಟ್ಟಿಗಳು ಖರೀದಿದಾರರನ್ನು ಆಕರ್ಷಿಸುತ್ತಿವೆ.