ಬೆಂಗಳೂರು: 'ಸ್ಟೂಡೆಂಟ್ಸ್ ಲೈಫ್ ಈಸ್ ಗೋಲ್ಡನ್ ಲೈಫ್' ಅನ್ನೋ ಮಾತು ಸುಳ್ಳಲ್ಲ. ಆದರೆ ಈ ಚಿನ್ನದ ಬದುಕನ್ನು ಕಸಿದುಕೊಂಡಿದ್ದು ಕೊರೊನಾ ವೈರಸ್. ಆಟ-ಪಾಠ ಅಂತಿದ್ದವರಿಗೆ ಆನ್ಲೈನ್ನಲ್ಲೇ ಕಲಿಕೆ ಮುಗಿಸುವ ಕಾಲವೂ ಬಂದುಬಿಟ್ಟಿತ್ತು. ಇದೀಗ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ ಭೌತಿಕ ತರಗತಿಗಳು ಶುರುವಾಗಿದೆ.
ಬೆಂಗಳೂರಿನ ಬಹುತೇಕ ಶಾಲಾ-ಕಾಲೇಜುಗಳಲ್ಲಿ ಮೊದಲ ಕ್ಲಾಸ್ ಶುರುವಾಗಿದ್ದು, ವಿದ್ಯಾರ್ಥಿಗಳು ತಮ್ಮ ಕೋವಿಡ್ ನೆಗೆಟಿವ್ ವರದಿಯೊಂದಿಗೆ ಕಾಲೇಜಿಗೆ ಆಗಮಿಸುತ್ತಿದ್ದಾರೆ. ಬಹುದಿನಗಳ ಬಳಿಕ ತಮ್ಮ ಸ್ನೇಹಿತರು, ಉಪನ್ಯಾಸಕರು ಹಾಗೂ ಕಾಲೇಜು ಕ್ಯಾಂಪಸ್ ಮಿಸ್ ಮಾಡಿಕೊಂಡಿದ್ದವರು ಖುಷಿಯಿಂದ ಬಂದು ಸೇರುತ್ತಿರುವ ದೃಶ್ಯ ಕಂಡುಬಂತು.
ಕಾಲೇಜಿಗೆ ಬಂದ ವಿದ್ಯಾರ್ಥಿಗಳು ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರದೊಂದಿಗೆ ಕಾಲೇಜು ಕ್ಯಾಂಪಸ್ ಪ್ರವೇಶಿಸಿದರು. ಇಂದು ಪ್ರಥಮ ಪಿಯುಸಿ ಆರಂಭವಾಗುತ್ತಿದ್ದು, ಹೊಸ ವಿದ್ಯಾರ್ಥಿಗಳಿಗೆ ತರಗತಿ ಕೊಠಡಿ ಗೊಂದಲವಾಗಬಾರದು ಎಂಬ ಕಾರಣಕ್ಕೆ ಎನ್ಸಿಸಿ ಅವರನ್ನು ನಿಯೋಜಿಸಲಾಗಿದೆ. ಕೋವಿಡ್ ನಿಯಮದ ಬಗ್ಗೆ ಎಚ್ಚರಿಸುತ್ತ, ಸಾಮಾಜಿಕ ಅಂತರ ಪಾಲಿಸುವಂತೆ ತಿಳಿಸುತ್ತ, ಹೊಸ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು. ವಿದ್ಯಾರ್ಥಿಗಳು ತಮ್ಮ ಕ್ಯಾಂಪಸ್, ಸ್ನೇಹಿತರನ್ನು ಭೇಟಿ ಮಾಡುತ್ತ ನಗುಮುಖದಿಂದ ಶುಭಾಶಯ ಕೋರಿದರು. ಈಗಾಗಲೇ ಬೆಳಗ್ಗಿನ ಮೊದಲ ತರಗತಿ ಶುರುವಾಗಿದ್ದು, ವಿದ್ಯಾರ್ಥಿಗಳು ಬಹುಸಂಖ್ಯೆಯಲ್ಲೇ ಆಗಮಿಸಿದ್ದರು.
ಬೀಗ ಹಾಕಲಾಗಿದ್ದ ಕಾಲೇಜುಗಳು ಓಪನ್ ಆಗಿದ್ದು, ವಿದ್ಯಾರ್ಥಿಗಳಿಲ್ಲದೇ ಬೀಕೋ ಎನ್ನುತ್ತಿದ್ದ ಕಾಲೇಜು ಆವರಣ ಇಂದು ಕಲರ್ಫುಲ್ ಆಗಿದೆ.
ಇದನ್ನೂ ಓದಿ:ಶಾಲೆಯೆಂಬ ದೇವಸ್ಥಾನ ನಮ್ಮ ಸಮಾಜಕ್ಕೆ ಒಳಿತು ಮಾಡಲಿ: ಸುರೇಶ್ ಕುಮಾರ್