ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಗೆ ಬ್ರೇಕ್ ಹಾಕುವಲ್ಲಿ ಸರ್ಕಾರ ಮೂರು ದಿನಗಳ ಕಾಲ ನಿಷೇಧಾಜ್ಞೆ ಹೊರಡಿಸಿದೆ. 144 ಸೆಕ್ಷನ್ ನಡುವೆಯೂ ಬೆಂಗಳೂರು-ಬನ್ನೇರುಘಟ್ಟ ರಸ್ತೆಯಲ್ಲಿರುವ ಐಐಎಂಬಿ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಗೇಟಿನ ಒಳಗಡೆ ಕಾಯ್ದೆ ಖಂಡಿಸುವ ಘೋಷ ವಾಕ್ಯಗಳನ್ನೊಳಗೊಂಡ ಫಲಕ ಪ್ರದರ್ಶಿಸುತ್ತಾ ಮೌನ ಪ್ರತಿಭಟನೆ ನಡೆಸಿದರು.
ನಿಷೇಧಾಜ್ಞೆ ನಡುವೆ ಪೌರತ್ವ ಕಾಯ್ದೆ ವಿರೋಧಿಸಿ ಕಾಲೇಜು ವಿದ್ಯಾರ್ಥಿಗಳಿಂದ ಮೌನ ಪ್ರತಿಭಟನೆ. ಗೇಟಿನ ಆಚೆ ವಿದ್ಯಾರ್ಥಿಗಳು ಚಪ್ಪಲಿಗಳನ್ನು ಸಾಲಾಗಿ ಜೋಡಿಸಿ 'ಶೂ ಇಲ್ಲದ ಕಾಲುಗಳು, ವಿದ್ಯಾರ್ಥಿಗಳಿಲ್ಲದ ಕಾಲೇಜು' ಎಂಬ ಸಂದೇಶ ರವಾನಿಸಿದರು.
ಅಲ್ಲದೆ ಪೊಲೀಸರ ಮಾತಿಗೆ ಆಡಳಿತ ಮಂಡಳಿ ಸ್ಪಂದಿಸಿ ವಿದ್ಯಾರ್ಥಿಗಳ ಮೇಲೆ ಧಮ್ಕಿ ಹಾಕಿ ಪ್ರತಿಭಟನೆ ಹಿಂಪಡೆಯುವಂತೆ ಒತ್ತಾಯ ಹೇರುತ್ತಿದೆ. ಅಲ್ಲದೆ ಹೊರಗಿನ ಚಪ್ಪಲಿ ತೆಗೆದುಕೊಳ್ಳಲು ಅವಕಾಶ ನೀಡಬೇಕು ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು. ಅದಕ್ಕೆ ಐಐಎಂಬಿ ಆಡಳಿತ ಮಂಡಳಿ ಒಪ್ಪದೆ ಇಡೀ ಚಪ್ಪಲಿಯ ಮೂಟೆಯನ್ನು ಗೇಟಿನೊಳಕೆ ಎಸೆಯುವ ಯೋಜನೆ ಹಾಕಿದರಾದರೂ, ಕೊನೆಗೆ ವಿದ್ಯಾರ್ಥಿಗಳು ಚಪ್ಪಲಿ ಹಾಕಿಕೊಳ್ಳುವುದಿಲ್ಲವೆಂದು ಪೊಲೀಸರು-ಆಡಳಿತ ಮಂಡಳಿ ವಿರುದ್ಧ ಶಾಂತಿಯುತವಾಗಿಯೇ ತಿರುಗಿಬಿದ್ದಿದ್ದಾರೆ.
ಕಾಲೇಜಿನ ಪ್ರಾಧ್ಯಾಪಕರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರಿಂದ ಪೊಲೀಸರು ವಶಕ್ಕೆ ಪಡೆದಿದ್ದು, ನಂತರ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು ಬಿಡುಗಡೆ ಮಾಡಿದ್ದಾರೆ.